ನವದೆಹಲಿ: ಐಸಿಸಿ ಕ್ರಿಕೆಟ್ ನ ಶ್ರೇಷ್ಠ ಆಟಗಾರರಿಗೆ ವಿಶೇಷ ಗೌರವವನ್ನು ಘೋಷಿಸಿದೆ. ಕ್ರಿಕೆಟ್ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಮೂವರು ಆಟಗಾರರಿಗೆ ಈ ಗೌರವ ಸಂದಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಆಟಗಾರರಿಗೆ ಈ ಗೌರವವನ್ನು ನೀಡಲಾಗಿದೆ. ವಿಶೇಷ ಅಂದರೆ ಈ ಮೂವರು ಸಾಧಕರಲ್ಲಿ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಹಾಗೂ ಒಬ್ಬರು ಮಾಜಿ ಬೌಲರ್.
ಐಸಿಸಿ ಘೋಷಿಸಿದ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ಸ್ಟಾರ್ ಒಪನರ್ ಅಲಿಸ್ಟರ್ ಕುಕ್, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್, ಭಾರತ ತಂಡದ ಮಾಜಿ ಬೌಲರ್ ನೀತು ಡೇವಿಡ್ ಸೇರಿದ್ದಾರೆ. ಮೂವರಿಗೂ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನೀತು ಡೇವಿಡ್ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ. ಇವರು ಸಿಕ್ಕ ಅವಕಾಶದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಭಾರತದ ಕ್ರಿಕೆಟ್ ಇತಹಾಸದ ಪುಟಗಳನ್ನು ತಿರುವಿದರೆ, ನೀತು ಡೇವಿಡ್ ಅವರ ಸಾಧನೆ ಕಣ್ಣ ಮುಂದೆ ಬರುತ್ತದೆ. ಎಡಗೈ ಸ್ಪಿನ್ ಬೌಲರ್ ಆಗಿ ಮಿಂಚಿರುವ ನೀತು ಡೇವಿಡ್, ಮಹಿಳಾ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಆಟಗಾರ್ತಿಯರಲ್ಲಿ ಇವರ ಹೆಸರು ಅಗ್ರಸ್ಥಾನದಲ್ಲಿದೆ.
ಐಸಿಸಿಯ ಉನ್ನತ ಗೌರವವನ್ನು ತನ್ನದಾಗಿಸಿಕೊಂಡ ಆಟಗಾರ್ತಿಯರ ಪಟ್ಟಿಯಲ್ಲಿ ನೀತು ಡೇವಿಡ್‌ಗೆ ಎರಡನೇ ಸ್ಥಾನ. ಇವರಿಗೂ ಮೊದಲು ಈ ಗೌರವವನ್ನು ಡಯಾನಾ ಎಡುಲ್ಜಿ ಪಡೆದಿದ್ದರು.

ಭಾರತದ ಪರ ನೀತು ಡೇವಿಡ್ ಅವರು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು 25 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 97 ಪಂದ್ಯಗಳಲ್ಲಿ 74 ವಿಕೆಟ್ ಕಿತ್ತಿದ್ದಾರೆ. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಐಸಿಸಿ ಹಾಲ್ ಆಫ್ ಫೆಮ್ ಪಟ್ಟಿಯಲ್ಲಿ ಸ್ಥಾನ ಪಡೆದ ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ. ಇವರು ವೇಗದ ಆಟಕ್ಕೆ ಹೆಸರುವಾಸಿ. ಎಬಿಡಿಯುನ್ನು ಅಭಿಮಾನಿಗಳು ಮಿಸ್ಟರ್ 360 ಎಂದು ಪ್ರೀತಿಯಿಂದ ಕರೆಯುತ್ತಾರೆ. ಎಬಿಡಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯಗಳಲ್ಲಿ 22 ಶತಕ ಹಾಗೂ 46 ಅರ್ಧಶತ ಸೇರಿದಂತೆ ಒಟ್ಟು 8765 ರನ್ ಸಿಡಿಸಿದ್ದಾರೆ.
ಇನ್ನು 228 ಏಕದಿನ ಪಂದ್ಯಗಳಲ್ಲಿ 53.50ರ ಸರಾಸರಿಯಲ್ಲಿ 9577 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕ ಹಾಗೂ 53 ಅರ್ಧಶತಕಗಳು ಸೇರಿವೆ. ಚುಟುಕು ಫಾರ್ಮೆಟ್‌ನಲ್ಲಿ ಎಬಿಡಿ 78 ಪಂದ್ಯಗಳಲ್ಲಿ 1672 ರನ್ ಕಲೆ ಹಾಕಿದ್ದು, 10 ಅರ್ಧಶತಕಗಳು ಸೇರಿವೆ.
ಇಂಗ್ಲೆಂಡ್ ತಂಡದ ಆಟಗಾರ ಅಲಿಸ್ಟರ್ ಕುಕ್ ಈ ಪಟ್ಟಿಯಲ್ಲಿದ್ದಾರೆ. ಇವರು 161 ಟೆಸ್ಟ್ ಪಂದ್ಯಗಳಲ್ಲಿ 12472 ರನ್ ಸಿಡಿಸಿದ್ದು, 33 ಶತಕ ಹಾಗೂ 57 ಅರ್ಧಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ ಕುಕ್ 92 ಪಂದ್ಯಗಳಲ್ಲಿ 3204 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 19 ಅರ್ಧಶತಕಗಳಿವೆ. ಟಿ20 ಕ್ರಿಕೆಟ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಕುಕ್ 61 ರನ್ ಸಿಡಿಸಿದ್ದಾರೆ.