
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೀಡುವ ವರ್ಷದ ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ನಾಲ್ವರನ್ನು ನಾಮನಿರ್ದೇಶನಗೊಳಿಸಲಾಗಿದ್ದು ಇದರಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಕೂಡ ಸೇರಿದ್ದಾರೆ.
ಈ ಪ್ರಶಸ್ತಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಆಯ್ಕೆಯಾದರೆ ಏಕದಿನ ಕ್ರಿಕೆಟ್‌ನಲ್ಲಿ ಈ ಪ್ರಶಸ್ತಿಯನ್ನು ಪಡೆದ ಪಾಕಿಸ್ತಾನ ತಂಡದ ಮೊದಲ ಆಟಗಾರ ಎನಿಸಲಿದ್ದಾರೆ. ಎಲ್ಲಾ ಮಾದರಿಯಲ್ಲಿ ಮೂರನೇ ಆಟಗಾರ ಎನಿಸಲಿದ್ದಾರೆ. 2007ರಲ್ಲಿ ಮೊಹಮ್ಮದ್ ಯೂಸುಫ್ ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ 2017ರಲ್ಲಿ ಹಸನ್ ಅಲಿ ವರ್ಷದ ಶ್ರೇಷ್ಠ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ಉ ಪಡೆದುಕೊಂಡಿದ್ದಾರೆ.
ಇನ್ನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಇತರ ಇಬ್ಬರು ಆಟಗಾರರು ಎಂದರೆ ದಕ್ಷಿಣ ಆಫ್ರಿಕಾ ತಂಡದ ಜನ್ನೆಮ್ಯಾನ್ ಮಲನ್ ಹಾಗೂ ಐರ್ಲೆಂಡ್ ತಂಡದ ಪಾಲ್ ಸ್ಟಿರ್ಲಿಂಗ್ ಈ ಪ್ರಶಸ್ತಿಯ ಕಣದಲ್ಲಿದ್ದಾರೆ. ಇನ್ನು ಬಾಬರ್ ಅಜಂ ವರ್ಷ ಕೇವಲ ಆರು ಏಕದಿನ ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಆದರೆ ಆಡಿದ ಎರಡು ಸರಣಿಯಲ್ಲಿ ಪಾಕಿಸ್ತಾನ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ.
ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಸರಣಿಯಲ್ಲಿ 2-1 ಅಂತರದ ಗೆಲುವು ಸಾಧಿಸಿತ್ತು. ಈ ಸರಣಿಯಲ್ಲಿ ಪಾಕಿಸ್ತಾನ ಗೆದ್ದ ಎರಡು ಪಂದ್ಯದಲ್ಲಿಯೂ ಬಾಬರ್ ಅಜಂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 274 ರನ್‌ಗಳನ್ನು ಬೆನ್ನಟ್ಟಿ ಗೆದ್ದಾಗ ಪ್ರಮುಖ ಕೊಡುಗೆಯನ್ನು ನೀಡಿದ್ದರು ಬಾಬರ್. ಈ ಪಂದ್ಯದಲ್ಲಿ ಶತಕ ಸಿಡಿಸಿ ಪಾಕ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿಯೂ ಪ್ರಮುಖ ಕೊಡುಗೆಯನ್ನು ನೀಡಿದ್ದರು.
ಇನ್ನು ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಪಾಕಿಸ್ತಾನ 0-3 ಅಂತರದಿಂದ ಕ್ಲೀನ್ ಸ್ವೀಪ್ ಅವಮಾನಕ್ಕೆ ತುತ್ತಾಯಿತಾದರೂ ಈ ಸರಣಿಯಲ್ಲಿ ಬಾಬರ್ ಅಜಂ ಏಕಾಂಗಿ ಹೋರಾಟವನ್ನು ನೀಡಿದ್ದಾರೆ. ಮೂರು ಪಂದ್ಯಗಳಲ್ಲಿ ಬಾಬರ್ ಅಜಂ 177 ರನ್‌ಗಳನ್ನು ಗಳಿಸಿದ್ದರು. ಉಳಿದ ಯಾವ ಆಟಗಾರನಿಂದಲೂ ಪಾಕ್ ತಂಡದ ನಾಯಕನಿಗೆ ಬೆಂಬಲ ದೊರೆತಿರಲಿಲ್ಲ.
ಏಕದಿನ ಮಾದರಿಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಶಕೀಬ್: ಇನ್ನು ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಎರಡು ವರ್ಷಗಳ ನಿಶೇಧದ ಬಳಿಕ ತಂಡಕ್ಕೆ ಮರಳಿದ್ದರು. ಆದರೆ ಏಕದಿನ ಮಾದರಿಯಲ್ಲಿ ಶಕೀಬ್ ಅಲ್ ಹಸನ್ ಅಮೋಘ ಕಮ್‌ಬ್ಯಾಕ್ ಮಾಡಿದ್ದಾರೆ. 2021ರ ಜನವರಿ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಶಕೀಬ್ ಅದ್ಭುತ ಪ್ರದರ್ಶನ ನಿಡಿ ಮಿಂಚುಹರಿಸಿದ್ದರು. ಈ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ ತವರಿನಲ್ಲಿ ನಡೆದ ಶ್ರಿಲಂಕಾ ವಿರುದ್ಧದ ಸರಣಿಯಲ್ಲಿ ಹಸನ್ ಪ್ರದರ್ಶನ ಉತ್ತಮವಾಗಿರಲಿಲ್ಲ.
ಐಸಿಸಿ ಪುರುಷರ ವರ್ಷದ ಏಕದಿನ ಆಟಗಾರ ನಾಮಿನಿಗಳು
ಬಾಬರ್ ಅಜಮ್, ಜನೆಮನ್ ಮಲಾನ್, ಶಕೀಬ್ ಅಲ್ ಹಸನ್, ಪಾಲ್ ಸ್ಟಿರ್ಲಿಂಗ್
ಐಸಿಸಿ ಪುರುಷರ ವರ್ಷದ ಟಿ20 ಆಟಗಾರ ನಾಮಿನಿಗಳು
ಜೋಸ್ ಬಟ್ಲರ್, ವನಿಂದು ಹಸರಂಗ, ಮಿಚೆಲ್ ಮಾರ್ಷ್, ಮೊಹಮ್ಮದ್ ರಿಜ್ವಾನ್
ಐಸಿಸಿ ಪುರುಷರ ವರ್ಷದ ಟೆಸ್ಟ್ ಆಟಗಾರ ನಾಮಿನಿಗಳು
ಜೋ ರೂಟ್, ಆರ್ ಅಶ್ವಿನ್, ದಿಮುತ್ ಕರುಣರತ್ನೆ, ಕೈಲ್ ಜೇಮಿಸನ್