ICC ODI Ranking: ಬಾಬರ್ ಅಜಂ, ಶಾಹೀನ್ ಅಫ್ರಿದಿಯಿಂದ ನಂ.1 ಸ್ಥಾನ ಕಿತ್ತುಕೊಂಡ ಶುಭ್ಮನ್ ಗಿಲ್, ಸಿರಾಜ್!
ಎಂಆರ್ಎಫ್ ಟೈರ್ಸ್ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರಿಂದ ನಂ.1 ಬ್ಯಾಟರ್ ಸ್ಥಾನವನ್ನು ಪಡೆದುಕೊಳ್ಳುವುದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಯುವ ಬ್ಯಾಟರ್ ಶುಭ್ಮನ್ ಗಿಲ್ ಆಳ್ವಿಕೆ ಶುರುವಾಗಿದೆ.
ಇಷ್ಟು ಮಾತ್ರವಲ್ಲದೆ, ಐಸಿಸಿ ಪುರುಷರ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಅವರಿಂದ ನಂ.1 ಬೌಲರ್ ಸ್ಥಾನವನ್ನು ಮರಳಿ ಪಡೆಯುವ ಮೂಲಕ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ಹವಾ ಎಬ್ಬಿಸಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಅತ್ಯುತ್ತಮ ಅಭಿಯಾನದ ಹಿನ್ನೆಲೆಯಲ್ಲಿ ಬಾಬರ್ ಅಜಂ ಅವರನ್ನು ಕೆಳಗಿಳಿಸಿ ಶುಭ್ಮನ್ ಗಿಲ್ ಅಗ್ರಸ್ಥಾನಕ್ಕೆ ಏರಿದರು. ಈ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ, ಶುಭ್ಮನ್ ಗಿಲ್ ನಂ.1 ಏಕದಿನ ಬ್ಯಾಟರ್ ಸ್ಥಾನ ಪಡೆದ ಭಾರತದ ನಾಲ್ಕನೇ ಆಟಗಾರ ಎನಿಸಿದರು.
ಶುಭ್ಮನ್ ಗಿಲ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 92 ರನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಆರು ಇನ್ನಿಂಗ್ಸ್‌ಗಳಿಂದ ಒಟ್ಟು 219 ರನ್ ಬಾರಿಸಿದ್ದಾರೆ.

ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ
ಇನ್ನು ಈ ವಿಶ್ವಕಪ್‌ನಲ್ಲಿ ಬಾಬರ್ ಅಜಂ ಎಂಟು ಪಂದ್ಯಗಳಿಂದ ಒಟ್ಟು 282 ರನ್‌ಗಳನ್ನು ಕಲೆಹಾಕಿದ್ದಾರೆ. ಇದೀಗ ವಿಶ್ವದ ನಂ.1 ಏಕದಿನ ಶ್ರೇಯಾಂಕದ ಬ್ಯಾಟರ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ, ಎರಡು ವರ್ಷಗಳಿಗಿಂತಲೂ ಅಧಿಕ ಅವಧಿಯ ಆಳ್ವಿಕೆಯ ಬಳಿಕ ಶುಭ್ಮನ್ ಗಿಲ್ ಅವರಿಗಿಂತ ಆರು ರೇಟಿಂಗ್ ಪಾಯಿಂಟ್‌ಗಳ ಹಿಂದೆ ಇದ್ದಾರೆ.
ಶುಭ್ಮನ್ ಗಿಲ್ ಅಗ್ರಸ್ಥಾನಕ್ಕೆ ಏರಿದರೆ, ಭಾರತ ತಂಡದ ಮಾಜಿ ನಾಯಕ ಕೊಹ್ಲಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಇದು ಭಾರತ ತಂಡಕ್ಕೆ ಸಿಹಿಸುದ್ದಿ ಹಾಗೂ ಶುಭದಿನವಾಗಿದೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಪ್ರಸಕ್ತ ವಿಶ್ವಕಪ್‌ನಲ್ಲಿ 10 ವಿಕೆಟ್ ಪಡೆದ ನಂತರ, ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಏಕದಿನ ಶ್ರೇಯಾಂಕ ಪಟ್ಟಿಯ ಅಗ್ರ 10ರೊಳಗೆ ದೊಡ್ಡ ಸ್ಥಾನಪಲ್ಲಟವಾಗಿದೆ ಮತ್ತು ಭಾರತೀಯ ತಾರೆಗಳ ಪಾರುಪತ್ಯ ಎಂದರೆ ಆಶ್ಚರ್ಯವೇನಿಲ್ಲ.
ಶುಭ್ನನ್ ಗಿಲ್ ಕಡಿಮೆ ಅನುಭವದಲ್ಲಿಯೂ, ಪ್ರಭಾವಶಾಲಿ ವೃತ್ತಿಜೀವನದ ಮೂಲಕ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದರೆ, ವಿರಾಟ್ ಕೊಹ್ಲಿ ಮೂರು ಸ್ಥಾನಗಳ ಏರಿಕೆ ಕಂಡು ನಾಲ್ಕನೇ ಸ್ಥಾನಕ್ಕೆ ಜಿಗಿದರು.
ಇನ್ನು ವಿಶ್ವಕಪ್‌ನಲ್ಲಿ 543 ರನ್‌ಗಳನ್ನು ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಸತತ ಎರಡು ಅರ್ಧಶತಕಗಳ ಬಳಿಕ ಶ್ರೇಯಸ್ ಅಯ್ಯರ್ ಕೂಡ 17 ಸ್ಥಾನಗಳ ಜಿಗಿತದೊಂದಿಗೆ ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ 18ನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಮೂರು ಸ್ಥಾನಗಳ ಏರಿಕೆ ಕಂಡು 11ನೇ ಸ್ಥಾನ ತಲುಪಿದ್ದಾರೆ ಮತ್ತು ಅಫ್ಘಾನಿಸ್ತಾನದ ಆರಂಭಿಕ ಇಬ್ರಾಹಿಂ ಝದ್ರಾನ್ 6 ಸ್ಥಾನಗಳ ಏರಿಕೆ ಕಂಡು 12ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕ
ಏಕದಿನ ಬೌಲರ್ ಶ್ರೇಯಾಂಕದ ಅಗ್ರಸ್ಥಾನವನ್ನು ಮೊಹಮ್ಮದ್ ಸಿರಾಜ್ ಆಕ್ರಮಿಸಿಕೊಂಡರೆ, ಅಗ್ರ 10ರೊಳಗೆ ಭಾರತದ ನಾಲ್ವರು ಬೌಲರ್‌ಗಳು ಸ್ಥಾನ ಪಡೆದಿದ್ದಾರೆ.
ಸ್ಪಿನ್ನರ್ ಕುಲದೀಪ್ ಯಾದವ್ 3 ಸ್ಥಾನಗಳ ಮೇಲೇರಿ 4ನೇ ಸ್ಥಾನಕ್ಕೆ, ಜಸ್ಪ್ರೀತ್ ಬುಮ್ರಾ ಮೂರ ಸ್ಥಾನಗಳ ಏರಿಕೆ ಕಂಡು 8ನೇ ಸ್ಥಾನ ತಲುಪಿದ್ದಾರೆ ಮತ್ತು ಮೊಹಮ್ಮದ್ ಶಮಿ ಏಳು ಸ್ಥಾನ ಜಿಗಿದು 10ನೇ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ಸ್ಥಾನ ಮೇಲೇರಿ ಎರಡನೇ ಸ್ಥಾನ ಪಡೆದಿದ್ದಾರೆ ಮತ್ತು ಆಸ್ಟ್ರೇಲಿಯಾದ ಆಡಮ್ ಝಂಪಾ ಆರು ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಜಿಗಿದು ಅಗ್ರ 10ರೊಳಗಿನ ಇತರ ದೊಡ್ಡ ಸ್ಥಾನಪಲ್ಲಟಗಳಾಗಿವೆ.
ಕಳೆದ ವಾರವಷ್ಟೇ ನಂ.1 ಏಕದಿನ ಬೌಲರ್ ಎನಿಸಿದ್ದ ಪಾಕಿಸ್ತಾನದ ಶಾಹೀನ್ ಅಫ್ರಿದಿ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಜಲ್‌ವುಡ್ ಜೊತೆಗೆ ಜಂಟಿ ಐದನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಏಕದಿನ ಆಲ್‌ರೌಂಡರ್ ಶ್ರೇಯಾಂಕ
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಗಾಯದ ಕಾರಣ ವಿಶ್ವಕಪ್‌ನ ಆರಂಭಿಕ ಪಂದ್ಯಗಳಿಂದ ನಿರ್ಗಮನದ ಹೊರತಾಗಿಯೂ ನಂ.1 ಶ್ರೇಯಾಂಕದ ಆಲ್‌ರೌಂಡರ್ ಆಗಿ ಉಳಿದಿದ್ದಾರೆ. ಆಸ್ಟ್ರೇಲಿಯಾದ ಅನುಭವಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮಂಗಳವಾರ ಮುಂಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ-ವಿಜೇತ ದ್ವಿಶತಕ ಬಾರಿಸಿದ ನಂತರ ಎರಡು ಸ್ಥಾನಗಳನ್ನು ಸುಧಾರಿಸಿ 6ನೇ ಸ್ಥಾನಕ್ಕೆ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications