
ನವದೆಹಲಿ, ಮೇ 31: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ (ನಾಣ್ಯ ಚಿಮ್ಮುವ) ಟಾಸ್ ವಿಧಾನ ಬೇಕೋ ಬೇಡವೋ ಎಂಬ ಚರ್ಚೆ ಇತ್ತೀಚೆಗೆ ಕ್ರಿಕೆಟ್ ವಲಯದಲ್ಲಿ ನಡೆದಿತ್ತು. ಆದರೆ ಟಾಸ್ ಕುರಿತ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಅಂತಾರಾಷ್ಟ್ರೀಯ ಟೆಸ್ಟ ಕ್ರಿಕೆಟ್ ನಲ್ಲಿ ಟಾಸ್ ವಿಧಾನ ಮುಂದುವರೆಯಲಿದೆ.
ಟೆಸ್ಟ್ ಕ್ರಿಕೆಟ್ ನಿಂದ ಟಾಸ್ ಕೈಬಿಡುವ ಪ್ರಸ್ತಾಪವನ್ನು ಈ ಹಿಂದೆ ಐಸಿಸಿ ಮುಂದಿಟ್ಟಿತ್ತು. ಇದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಕೂಡ ಬೆಂಬಲ ಸೂಚಿಸಿತ್ತು. ಆದರೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕೆಂದು ಐಸಿಸಿ ಹೇಳಿತ್ತು. ಅದರಂತೆ ಟಾಸ್ ಕೈ ಬಿಡುವ ಪ್ರಸ್ತಾವಕ್ಕೆ ಹಿನ್ನೆಡೆಯಾಗಿದೆ.
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಸ್ ವಿಧಾನದ ಅಗತ್ಯವಿಲ್ಲ. ಬದಲಿಗೆ ಅತಿಥೇಯರಿಗೆ ಮೊದಲು ಬ್ಯಾಟಿಂಗ್ ಅವಕಾಶ ನೀಡಬೇಕು ಎಂದೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ ಅನಿಲ್ ಕುಂಬ್ಳೆ ಮುಖ್ಯಸ್ಥರಾದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಮಿತಿಯು, ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ 'ಟಾಸ್' ಪದ್ಧತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ತವರಿನಲ್ಲಿ ಪೂರಕವಾದ ಪಿಚ್ ನಿರ್ಮಿಸುವ ಹಿನ್ನಲೆಯಲ್ಲಿ ಟಾಸ್ ಪದ್ಧತಿ ಕೈಬಿಡಬೇಕೆಂದು ಮಾತುಗಳು ಕೇಳಿ ಬಂದಿದ್ದವು. ಆದರೆ ಕುಂಬ್ಳೆ ಮುಖ್ಯಸ್ಥರಾದ ಐಸಿಸಿ ಸಭೆಯಲ್ಲಿ ಸ್ಫೋರ್ಟಿಂಗ್ ಪಿಚ್ ನಿರ್ಮಿಸಿ ಸ್ಪರ್ಧಾತ್ಮಕ ಕ್ರಿಕೆಟ್ ಗುಣಮಟ್ಟ ಕಾಯ್ದುಕೊಳ್ಳಲು ಸಲಹೆ ಮಾಡಲಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) 2016ರ ಕೌಂಟಿ ಚಾಂಪಿಯನ್ ಶಿಪ್ ನಿಂದ ಟಾಸ್ ಕಡ್ಡಾಯ ನಿಯಮವನ್ನು ತೆಗೆದುಹಾಕಿತ್ತು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಸ್ ಬೇಕೇ ಬೇಡವೆ ಎಂಬ ಬಗ್ಗೆ ಚರ್ಚೆಗಳಾಗಿದ್ದವು.