ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಶ್ರೇಯಾಂಕದಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಈ ಒಬ್ಬ ಬ್ಯಾಟರ್ ಮಾತ್ರ ಭಾರೀ ಜಿಗಿತ ಕಂಡಿದ್ದು, ಸ್ಟಾರ್ ಆಟಗಾರರನ್ನು ಹಿಂದಿಕ್ಕಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯಗೆಲ್ಲದೇ ನಿರಾಸೆ ಅನುಭವಿಸಿದೆ. ಬೆಂಗಳೂರು, ಪುಣೆ ಹಾಗೂ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಪರದಾಡಿದ್ದಾರೆ. ಆದರೆ ಭರವಸೆಯ ವಿಕೆಟ್ ಕೀಪರ್ ರಿಷಭ್ ಪಂತ್ ಮಾತ್ರ ನೆಲಕ್ಕೆ ನಿಂತು ತಂಡಕ್ಕೆ ಆಧಾರವಾಗಿದ್ದರು.

ಮೂರು ಪಂದ್ಯಗಳ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಾಪ್ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಗ್ರ 10 ಬ್ಯಾಟರ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಮಾತ್ರ ಸ್ಥಾನ ಪಡೆದಿದ್ದಾರೆ.
ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಇವರು 777 ರೇಟಿಂಗ್ ಪಾಯಿಂಟ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗಿಂತಲೂ ಒಂದು ರೇಟಿಂಗ್ ಪಾಯಿಂಟ್ ಮುಂದಿರುವ ಹ್ಯಾರೀ ಬ್ರೂಕ್ ಮೂರನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾದ ಪರ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಬ್ಯಾಟರ್ ರಿಷಭ್ ಪಂತ್ ಶ್ರೇಯಾಂಕದಲ್ಲಿ ಐದು ಸ್ಥಾನ ಬಡ್ತಿ ಪಡೆದಿದ್ದಾರೆ. ಮುಂಬೈ ಟೆಸ್ಟ್‌ನಲ್ಲಿ ರಿಷಬ್ ಪಂತ್ ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಉತ್ತಮ ಪ್ರದರ್ಶನ ನೀಡಿದ್ದರು ಮತ್ತು ಈ ಬಾರಿಯ ರ‍್ಯಾಂಕಿಂಗ್‌ನಲ್ಲಿ ಅವರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇವರು ಸದ್ಯ 750 ರೇಟಿಂಗ್ ಪಾಯಿಂಟ್‌ನೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ. ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಇದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಈಗಲೂ ನಂಬರ್ ಒನ್ ಸ್ಥಾನದಲ್ಲಿದ್ದು, ಇವರು ರೇಟಿಂಗ್ 903 ಹೊಂದಿದ್ದಾರೆ. ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿದ್ದು, ಇವರ ಬುಟ್ಟಿಯಲ್ಲಿ 804 ಅಂಕಗಳಿವೆ. ಅಂದರೆ ಮೊದಲ ಮತ್ತು ಎರಡನೇ ಬ್ಯಾಟ್ಸ್‌ಮನ್ ನಡುವಿನ ವ್ಯತ್ಯಾಸವು ತುಂಬಾ ದೊಡ್ಡದಾಗಿದೆ.
ಭಾರತದ ಪರ ಟಾಪ್ 20ಯಲ್ಲಿ ಸ್ಥಾನ ಪಡೆದ ಇನ್ನೊಬ್ಬ ಬ್ಯಾಟರ್ ಶುಭಮನ್ ಗಿಲ್. ಇವರು 680 ರೇಟಿಂಗ್ ಪಾಯಿಂಟ್‌ಗಳೊಂದಿಗೆ 16ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಎಂಟು ಸ್ಥಾನ ಕಳೆದುಕೊಂಡಿದ್ದು, 655 ರೇಟಿಂಗ್ ಪಾಯಿಂಟ್‌ಗಳೊಂದಿಗೆ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಕುಸಿತ ಕಂಡಿದ್ದು 629 ಅಂಕಗಳೊಂದಿಗೆ 26ನೇ ಸ್ಥಾನದಲ್ಲಿದ್ದಾರೆ.