ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಮಾರ್ಚ್ 9 ರಂದು ಮುಕ್ತಾಯಗೊಂಡಿದೆ. ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ ಟೂರ್ನಿಯನ್ನು ಸಂತೋಷದಿಂದ ಕೊನೆಗೊಳಿಸಿದೆ. ಟೂರ್ನಿಯುದ್ದಕ್ಕೂ ರೋಹಿತ್ ಶರ್ಮಾ ಪಡೆ ಅಜೇಯರಾಗಿ ಚಾಂಪಿಯನ್ ಪಟ್ಟಕ್ಕೇರಿದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಏಕದಿನ ರ‍್ಯಾಕಿಂಗ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರೋಹಿತ್ ಶರ್ಮಾ ಲಾಭ ಪಡೆದಿದ್ದರೆ, ವಿರಾಟ್ ಕೊಹ್ಲಿ ಕೆಳಗಿಳಿಸಿದ್ದಾರೆ.
ಐಸಿಸಿ ಏಕದಿನ ಬೌಲರ್‌ಗಳ ರ‍್ಯಾಕಿಂಗ್‌ಗಳಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಏರಿಕೆ ಕಂಡಿದ್ದಾರೆ. ಕುಲದೀಪ್ ಯಾದವ್ ಅವರ ಪ್ರದರ್ಶನವು ಏರಿಳಿತಗಳಿಂದ ಕೂಡಿದ್ದರೂ, ಉತ್ತಮ ರ‍್ಯಾಕಿಂಗ್ ಪಡೆದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಟೂರ್ನಿಯಲ್ಲಿ ರನ್‌ಗಳ ಗಳಿಸುವುದರಲ್ಲಿ ಹಿಟ್‌ಮ್ಯಾನ್ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಗಿಂತ ಹಿಂದಿದ್ದರೂ, ಏಕದಿನ ಕ್ರಿಕೆಟ್‌ನ ಹೊಸ ರ‍್ಯಾಕಿಂಗ್ ಪಟ್ಟಿಯಲ್ಲಿ ಮುಂದಿದ್ದಾರೆ. ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಶ್ರೇಯಸ್ ಅಯ್ಯರ್ (8ನೇ ಸ್ಥಾನ) ತಮ್ಮ ಹಿಂದಿನ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ರೋಹಿತ್ ಶರ್ಮಾ ಎರಡು ಸ್ಥಾನ ಏರಿಕೆ ಕಂಡಿದ್ದು, ಈಗ ಮೂರನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿಯೂ ಕೊಹ್ಲಿ ಅಬ್ಬರಿಸಿದ್ದರು. ಅವರು 84 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಐಸಿಸಿ ಏಕದಿನ ರ‍್ಯಾಕಿಂಗ್‌ನಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಕೊಹ್ಲಿ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ನೂತನ ಐಸಿಸಿ ರ‍್ಯಾಕಿಂಗ್‌ನಲ್ಲಿ ಟೀಮ್ ಇಂಡಿಯಾ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಎಲ್ಲಾ ಸ್ಪಿನ್ನರ್‌ಗಳು ಲಾಭ ಪಡೆದಿದ್ದಾರೆ. ಬೌಲರ್‌ಗಳ ರ‍್ಯಾಕಿಂಗ್‌ನಲ್ಲಿ ಚೈನಾಮ್ಯಾನ್ ಸ್ಪಿನ್ನರ್ ಕುಲದೀಪ್ ಯಾದವ್ ಮೂರು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್ ಆರು ಸ್ಥಾನಗಳ ಏರಿಕೆ ಕಂಡು 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡದಿದ್ದರೂ, ಶ್ರೀಲಂಕಾದ ಅನುಭವಿ ಮಹೇಶ್ ದೀಕ್ಷಣ ನಂಬರ್ -1 ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಕೂಡ 3 ಸ್ಥಾನ ಜಿಗಿಯುವ ಮೂಲಕ ಟಾಪ್ -10 ರೊಳಗೆ ಪ್ರವೇಶಿಸಿದ್ದಾರೆ. ವರುಣ್ ಚಕ್ರವರ್ತಿ ಕೂಡ 16ನೇ ಸ್ಥಾನ ಜಿಗಿದಿದ್ದಾರೆ.