ಆಗಸ್ಟ್ 11, ಶೇನ್ ವಾರ್ನ್ 600 ವಿಕೆಟ್ ಗಳೊಂದಿಗೆ ಶೈನ್ ಆದ ದಿನ!

ಸಿಡ್ನಿ, ಆಗಸ್ಟ್ 11: ಇಂಗ್ಲೆಂಡ್ ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ 2005ರ ಆಗಸ್ಟ್ 11ರಂದು ಇಂಗ್ಲೆಂಡ್-ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಶೇನ್ ವಾರ್ನ್ 600 ವಿಕೆಟ್ ಸಾಧನೆಯ ಇತಿಹಾಸ ನಿರ್ಮಿಸಿದ್ದರು. ಸ್ಪಿನ್ ಮಾಂತ್ರಿಕನ ಈ ಸಾಧನೆಯನ್ನು ಐಸಿಸಿ ಈ ದಿನ ಸ್ಮರಿಸಿಕೊಂಡಿದೆ.
ಟೆಸ್ಟ್ ನಲ್ಲಿ 600 ವಿಕೆಟ್ ಸಾಧನೆ ಮೆರೆದ ಸ್ಟೈಲಿಶ್ ಮ್ಯಾನ್ ಶೇನ್ ವಾರ್ನ್ ಅವರನ್ನು ನೆನಪಿಸಿಕೊಂಡಿರುವ ಐಸಿಸಿ, ತನ್ನ ಟ್ವಿಟರ್ ಖಾತೆಯಲ್ಲಿ ಈ ದಿನ ಮಹತ್ವದ ಸಾಲನ್ನು ಬರೆದು ಶೇನ್ ಚಿತ್ರ ಹಾಕಿಕೊಂಡಿದೆ. '2005ರ ಇದೇ ದಿನ ಶೇನ್ ಅವರ 600ನೇ ವಿಕೆಟ್ ಗೆ ಬಲಿಯಾದ ಆಟಗಾರ ಯಾರೆಂಬುದು ನೆನಪಿದೆಯೇ?' ಎಂದು ಸಾಲನ್ನು ಸೇರಿಸಿದೆ.
ಈ ದಿನ (ಆ.11) ಇಂಗ್ಲೆಂಡ್ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೊಥಿಕ್ ಅವರು ವಾರ್ನ್ 600ನೇ ವಿಕೆಟ್ ಗೆ ಬಲಿಯಾಗಿದ್ದರು. ಈ ವೇಳೆ ಇಂಗ್ಲೆಂಡ್ ನ ಸೈಮನ್ ಜೋನ್ಸ್ ಅವರೂ 6 ವಿಕೆಟ್ ಸಾಧನೆ ಮಾಡಿದ್ದರಿಂದ ಇಂಗ್ಲೆಂಡ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿತ್ತು.
ಟೆಸ್ಟ್ ಕ್ರಿಕೆಟ್ ನಲ್ಲಿ 600 ವಿಕೆಟ್ ಸಾಧಿಸಿದ ಮೊದಲ ಆಟಗಾರ ಖ್ಯಾತಿಗೆ ಶೇನ್ ವಾರ್ನ್ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಎಲ್ಲಾ (ಕ್ರಿಕೆಟ್ ಕಣಕ್ಕಿಳಿದ) ದೇಶಗಳೆದುರು ಪ್ರಾಬಲ್ಯ ಮೆರೆದಿರುವ ಶೇನ್ ಭಾರತ ಮತ್ತು ವೆಸ್ಟ್ ಇಂಡೀಸ್ ಎದುರು ಮಾತ್ರ ಅಷ್ಟೊಂದು ಮಿಂಚಿರಲಿಲ್ಲ.
'ಕೆಂಪು ಚೆಂಡು' ಕ್ರಿಕೆಟ್ ನಲ್ಲಿ ಅಧಿಕ ವಿಕೆಟ್ ಸಾಧನೆ ಹೊಂದಿರುವ ಆಟಗಾರರಲ್ಲಿ ಈಗಲೂ ಶೇನ್ ದ್ವಿತೀಯ (708) ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಬೌಲಿಂಗ್ ದೈತ್ಯ ಮುತ್ತಯ್ಯ ಮುರಳೀಧರನ್ ಭರ್ತಿ 800 ವಿಕೆಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ಶ್ರೇಷ್ಠ ಬೌಲರ್, ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದು ನಮಗೂ ಖುಷಿಯಲ್ಲಿ ಪಾಲು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications