ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿ

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮವನ್ನು ಘೋಷಿಸಿದೆ. ಈ ಅಂಕ ನಿಯಮ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಎರಡನೇ ಆವೃತ್ತಿ ಅಂದರೆ 2021-23ರ ವರೆಗೆ ನಡೆಯಲಿರುವ ಆವೃತ್ತಿಯಿಂದ ಅನ್ವಯಿಸಲ್ಪಡಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್‌ಗೆ ಸಂಬಂಧಿಸಿ ಬದಲಾವಣೆಯಾಗುತ್ತಿರುವುದು ಇದು ಮೂರನೇ ಬಾರಿ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ದ್ವಿತೀಯ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಶುರುವಾಗಲಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಈ ಟೆಸ್ಟ್ ಸರಣಿ ನಡೆಯಲಿದೆ. ಈ ಪಂದ್ಯದಿಂದಲೇ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ನೂತನ ಅಂಕ ನಿಯಮ ಅನ್ವಯವಾಗಲಿದೆ.

ಹಿಂದಿನ ಪಾಯಿಂಟ್ಸ್ ನಿಯಮ
WTC ಮೊದಲ ಆವೃತ್ತಿಯಲ್ಲಿ ಅಂದರೆ ಕಳೆದ ಜೂನ್ 23ರಲ್ಲಷ್ಟೇ ಮುಕ್ತಾಯಗೊಂಡ WTC ಪಂದ್ಯದ ವರೆಗೆ ಹಿಂದಿನ ಅಂಕ ನಿಯಮ ಜಾರಿಯಲ್ಲಿತ್ತು. ಅಂದರೆ ಟೆಸ್ಟ್ ಸರಣಿಯೊಂದಕ್ಕೆ 120 ಅಂಕ ನಿಗದಿಪಡಿಸಲಾಗಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿಯಾದರೆ ಪ್ರತೀ ಪಂದ್ಯಕ್ಕೆ 60 ಅಂಕ, 3 ಪಂದ್ಯಗಳ ಟೆಸ್ಟ್ ಸರಣಿಯಾದರೆ ಪ್ರತೀ ಪಂದ್ಯಕ್ಕೆ 40 ಅಂಕ ಹೀಗೆ.

WTC ಹೊಸ ಪಾಯಿಂಟ್ಸ್ ನಿಯಮ
ಮುಂದಿನ WTC ಆವೃತ್ತಿಯಿಂದ ಪ್ರತೀ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದೆ. ಇದರರ್ಥ ಸರಣಿಯೊಂದರಲ್ಲಿ 2 ಪಂದ್ಯಗಳಿರಲಿ ಅಥವಾ 5 ಪಂದ್ಯಗಳಗಳಿರಲಿ, ತಂಡವೊಂದು ಗೆಲ್ಲುವ ಪ್ರತೀ ಪಂದ್ಯಕ್ಕೂ 12 ಅಂಕ ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಟೈ ಆದರೆ 6 ಅಂಕ, ಪಂದ್ಯ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ ಎಂದು ಐಸಿಸಿ ಹೊಸದಾಗಿ ಘೋಷಿಸಿದೆ.

ಪಾಯಿಂಟ್ಸ್ ಟೇಬಲ್ ರ್‍ಯಾಂಕಿಂಗ್ ಹೇಗೆ?
ಸರಣಿಗಳಲ್ಲಿ ಪಂದ್ಯಗಳ ಸಂಖ್ಯೆ ಭಿನ್ನವಾಗಿರುವುದರಿಂದ ಪಾಯಿಂಟ್ಸ್ ಟೇಬಲ್‌ನ ರ್‍ಯಾಂಕಿಂಗ್ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಆದರೆ ಸರಣಿಯೊಂದರಲ್ಲಿ ಆಡಿದ ಪಂದ್ಯಗಳಲ್ಲಿ ಗೆದ್ದ ಪಂದ್ಯಗಳ ಶೇಕಡಾವಾರು ತೆಗೆದು ತಂಡಗಳಿಗೆ ರ್‍ಯಾಂಕಿಂಗ್ ಅಂಕ ನೀಡಲಾಗುತ್ತದೆ. ಈ ಅಂಕಗಳ ಆಧಾರದಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ತಂಡಗಳ ರ್‍ಯಾಂಕಿಂಗ್ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಮಾಹಿತಿ ನೀಡಿದೆ.

ಐಸಿಸಿ ಅಧಿಕೃತ ಹೇಳಿಕೆ
"ಪ್ರತೀ ಸರಣಿಗೆ 120ರಂತೆ ಅಂಕ ನೀಡುವ ಬದಲು ಒಂದು ಸರಣಿಯಲ್ಲಿ ಎಷ್ಟು ಪಂದ್ಯಗಳಿವೆ ಅನ್ನೋದನ್ನು ಲೆಕ್ಕಿಸದೆ ಅದು ಎರಡು ಟೆಸ್ಟ್ ಪಂದ್ಯಗಳ ಸರಣಿಯಿರಲಿ ಅಥವಾ ಐದು ಪಂದ್ಯಗಳ ಟೆಸ್ಟ್ ಸರಣಿಯಿರಲಿ, ಮುಂದಿನ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಪ್ರತೀ ಪಂದ್ಯಗಳಿಗೂ ಗರಿಷ್ಠ 12 ಅಂಕ ನೀಡಲಾಗುತ್ತದೆ. ಆಡಿದ ಪಂದ್ಯಗಳಲ್ಲಿ ಗೆದ್ದ ಪಂದ್ಯಗಳಿಗಾನುಸಾರ ಶೇಕಡಾವಾರಿನಂತೆ ತಂಡಗಳು ರ್‍ಯಾಂಕ್ ಪಡೆದುಕೊಳ್ಳುತ್ತವೆ," ಎಂದು ಐಸಿಸಿ ಬೋರ್ಡ್ ಪಿಟಿಐಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications