ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 32 ರನ್‌ಗಳ ಸೋಲನ್ನು ಕಂಡಿದೆ. ಈ ಸೋಲಿನ ನೋವನ್ನು ಇನ್ನು ಮಾಸುವ ಮುನ್ನವೇ ಟೀಮ್ ಇಂಡಿಯಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರೋಹಿತ್ ಪಡೆಗೆ ದಂಡವನ್ನು ವಿಧಿಸಿದೆ.
ಐಸಿಸಿ ಭಾರತ ತಂಡಕ್ಕೆ ದಂಡ ವಿಧಿಸಿದೆ. ಟೀಂ ಇಂಡಿಯಾಗೆ ಪಂದ್ಯ ಶುಲ್ಕದ ಶೇ.10ರಷ್ಟು ದಂಡ ವಿಧಿಸಲಾಗಿದೆ. ಸೋಲಿನ ನಂತರ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಅಂಕಗಳನ್ನು ಕಳೆದುಕೊಂಡಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದೆ. ಇದರಿಂದಾಗಿ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ 2 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರೊಂದಿಗೆ ಐಸಿಸಿ ಪಂದ್ಯ ಶುಲ್ಕದ ಶೇ.10ರಷ್ಟು ದಂಡವನ್ನೂ ವಿಧಿಸಿದೆ.
ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ನಿಗದಿ ಪಡಿಸಿದ ಓವರ್‌ಗಿಂತ ಎರಡು ಓವರ್‌ಗಳು ಕಡಿಮೆ ಮಾಡಿದ ಹಿನ್ನೆಲೆ, ಭಾರತಕ್ಕೆ ಈ ಶಿಕ್ಷೆಯನ್ನು ನೀಡಿದ್ದಾರೆ.

ಐಸಿಸಿ ನಿಯಮಗಳ ಪ್ರಕಾರ, ನಿಗದಿತ ಸಮಯದಲ್ಲಿ ತಂಡವು ನಿರ್ದಿಷ್ಟ ಸಂಖ್ಯೆಯ ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ನಿಧಾನಗತಿಯ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ಪ್ರತಿ ಓವರ್‌ಗೆ ಪಂದ್ಯದ ಶುಲ್ಕದ ಶೇಕಡಾ 5 ರಷ್ಟು ದಂಡವನ್ನು ವಿಧಿಸುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 2 ಓವರ್ ಕಡಿಮೆ ಬೌಲಿಂಗ್ ಮಾಡಿದೆ. ಇದರಿಂದಾಗಿ ಪಂದ್ಯ ಶುಲ್ಕದ ಶೇ.10ರಷ್ಟು ದಂಡ ವಿಧಿಸಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಆರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಾಕಷ್ಟು ನಷ್ಟ ಅನುಭವಿಸಿದೆ. ಪಂದ್ಯ ಶುಲ್ಕದ ಜತೆಗೆ 2 ಅಂಕವನ್ನೂ ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ಅಂಕ ಪಟ್ಟಿಯಲ್ಲಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮೂರನೇ ಮತ್ತು ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಐದನೇ ಸ್ಥಾನದಲ್ಲಿದೆ.