
ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ಮುಕ್ತಾಯವಾದ ನಂತರ ಐಸಿಸಿ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ನಾಲ್ಕು ಸ್ಥಾನ ಕುಸಿತ ಕಂಡಿದ್ದು 8ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಐದನೇ ಸ್ಥಾನವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಮ್ಮ ಅಂಕವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಅಂತರವನ್ನು ಕಾಯ್ದುಕೊಂಡಿದ್ದಾರೆ. ಈ ಮೂಲಕ ಅಗ್ರ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ ಪಾಕ್ ನಾಯಕ.
ಭಾರತೀಯ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಬಾರಿಯ ಟಿ20 ವಿಶ್ವಕಪ್‌ನ ಅಂತಿಮ ಮೂರು ಪಂದ್ಯಗಳಲ್ಲಿ ಭರ್ಜರಿ ಮೂರು ಅರ್ಧ ಶತಕ ಗಳಿಸಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಮೊತ್ತಕ್ಕೆ ಔಟಾಗಿದ್ದ ಕೆಎಲ್ ರಾಹುಲ್ ನಂತರ ಫಾರ್ಮ್‌ಗೆ ಮರಳಿದ್ದರು. ನಂತರ ನಡೆದ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ರಾಹುಲ್ ಸ್ಪೋಟಕ ಪ್ರದರ್ಶನ ನೀಡಿ ಅರ್ಧ ಶತಕಗಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಹುಲ್ ನೀಡಿದ ಪ್ರದರ್ಶನ ತಂಡಕ್ಕೆ ದೊಡ್ಡ ಲಾಭವೇನೂ ಮಾಡಲಿಲ್ಲ. ಟೀಮ್ ಇಂಡಿಯಾ ಸೂಪರ್ 12 ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿದೆ.
ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಆಟಗಾರ ಎಡೆನ್ ಮಾರ್ಕ್ರಮ್ ಮೂರು ಸ್ಥಾನಗಳ ಏರಿಕೆ ಕಂಡಿದ್ದು ಅಗ್ರ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಬರ್ ಅಜಂ ಹಾಗೂ ಡೇವಿಡ್ ಮಲನ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ ಮಾರ್ಕ್ರಮ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾರ್ಕ್ರಮ್ 25 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಮಾರ್ಕ್ರಮ್ ಕಾರಣವಾಗಿದ್ದರು. ಇದು ಕೂಡ ಮಾರ್ಕ್ರಮ್ ಉತ್ತಮ ಸ್ಥಾನ ಪಡೆಯಲು ಕಾರಣವಾಗಿದೆ.
ಇನ್ನು ಮಾರ್ಕ್ರಮ್ ನೀಡಿದ ಈ ಪ್ರದರ್ಶನದಿಂದಾಗಿ ಕೇವಲ ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಮಾತ್ರವಲ್ಲದೆ ಆಲ್‌ರೌಂಡರ್‌ಗಳ ಶ್ರೇಯಾಂಕಪಟ್ಟಿಯಲ್ಲಿಯೂ ಅವರ ಸ್ಥಾನವನ್ನು ಉತ್ತಮ ಪಡಿಸಿದೆ. ಆಲ್‌ರೌಂಡರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಮಾರ್ಕ್ರಮ್ ಭರ್ಜರಿ 7 ಸ್ಥಾನಗಳ ಏರಿಕೆ ಕಂಡಿದ್ದು ಸ್ಥಾನಗಳ ಟಾಪ್ 10ರಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮಾರ್ಕ್ರಮ್ ಈಗ 7ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಮತ್ತೋರ್ವ ಆಟಗಾರ ರಾಸ್ಸಿ ವಾನ್ ಡರ್ ಡಸ್ಸೆನ್ ಕೂಡ ಆರು ಸ್ಥಾನಗಳ ಏರಿಕೆ ಕಂಡಿದ್ದು ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಡಸ್ಸೆನ್ ಇಂಗ್ಲೆಂಡ್ ವಿರುದ್ಧ ಅಜೇಯ 94 ರನ್ ಬಾರಿಸಿ ಗೆಲುವಿಗೆ ಕಾರಣವಾಗಿದ್ದರು. ಆದರೆ ದುರದೃಷ್ಟವಶಾತ್ ದಕ್ಷಿಣ ಆಫ್ರಿಕಾ ತಂಡ ಈ ಭರ್ಜರಿ ಗೆಲುವಿನ ಹೊರತಾಗಿಯೂ ಸೆಮಿ ಫೈನಲ್‌ಗೇರುವಲ್ಲಿ ವಿಫಲವಾಗಿ ಸೂಪರ್ 12 ಹಂತದಿಂದಲೇ ಹೊರಬಿದ್ದಿದೆ. ನೆಟ್ ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸಿದ ಕಾರಣ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳಾದ ಆಡಂ ಜಂಪಾ ಹಾಗೂ ಜೋಶ್ ಹೇಜಲ್‌ವುಡ್ ಉತ್ತಮ ಏರಿಕೆ ಕಂಡಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ನೀಡುತ್ತಿರುವ ಅದ್ಭುತ ಪ್ರದರ್ಶನದಲ್ಲಿ ಈ ಇಬ್ಬರು ಬೌಲರ್‌ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಬಾಂಗ್ಲಾದೇಶ ವಿರುದ್ಧಧ ಪಂದ್ಯದಲ್ಲಿ ಜಂಪಾ 5 ವಿಕೆಟ್ ಕಬಳಿಸಿದ್ದು ಶ್ರೇಯಾಂಕಪಟ್ಟಿಯಲ್ಲಿ ಜಂಪಾ ಐದನೇ ಸ್ಥಾನ ಸಂಪಾದಿಸಲು ಕಾರಣವಾಗಿದೆ. ಹೇಜಲ್‌ವುಡ್ 11ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೇಜಲ್‌ವುಡ್ 4 ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.