ICC Test Ranking: ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಜೋ ರೂಟ್; ಕುಸಿತ ಕಂಡ ವಿರಾಟ್ ಕೊಹ್ಲಿ
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಬುಧವಾರ, ಜೂನ್ 21ರಂದು ಬಿಡುಗಡೆಯಾದ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ.
ಆಶಸ್‌ನ ಮೊದಲ ಟೆಸ್ಟ್ ಪಂದ್ಯದಲ್ಲಿ 0 ಮತ್ತು 13 ರನ್ ಗಳಿಸಿದ ನಂತರ, ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾಬುಸ್‌ಚಾಗ್ನೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಇದ್ದಾರೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರನ್ ಗಳಿಸಲು ವಿಫಲರಾದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಕಳೆದ ವಾರದಿಂದ ಕೇವಲ 700 ರ‍್ಯಾಂಕಿಂಗ್ ಅಂಕಗಳೊಂದಿಗೆ ವಿರಾಟ್ ಕೊಹ್ಲಿ 14ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ಮೂಲಕ ಬಲಗೈ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ನಂ.1 ಸ್ಥಾನಕ್ಕೆ ಏರಿಕೆ ಕಂಡಿದ್ದರು ಮತ್ತು ಆರು ತಿಂಗಳ ಕಾಲ ಅಗ್ರಸ್ಥಾನವನ್ನು ಹೊಂದಿದ್ದರು.
ಇದೀಗ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆಶಸ್‌ನ ರೋಚಕ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೋ ರೂಟ್ ಅವರು ತಮ್ಮ 30ನೇ ಟೆಸ್ಟ್ ಶತಕ ಬಾರಿಸಿದರು. ಅದರ ಫಲವಾಗಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದರು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ 118 ರನ್ ಮತ್ತು 46 ರನ್ ಗಳಿಸಿದ 32 ವರ್ಷದ ಜೋ ರೂಟ್, ಐದು ಸ್ಥಾನಗಳ ಏರಿಕೆ ಕಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅಗ್ರಸ್ಥಾನ ತಲುಪಿದರು.
ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ ಅವರು ಒಂದು ಸ್ಥಾನ ಇಳಿಕೆ ಕಂಡು 4ನೇ ಸ್ಥಾನ ಮತ್ತು ಸ್ಟೀವ್ ಸ್ಮಿತ್ ಅವರು ನಾಲ್ಕು ಸ್ಥಾನಗಳ ಇಳಿಕೆ ಕಂಡು ಆರನೇ ಸ್ಥಾನಕ್ಕೆ ಕುಸಿದರು. ನಂಬರ್ 1 ಟೆಸ್ಟ್ ಬ್ಯಾಟರ್ ಆಗುವ ಪೈಪೋಟಿಯಲ್ಲಿ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 10 ಸ್ಥಾನದಲ್ಲಿರುವ ಏಕೈಕ ಭಾರತೀಯ ಆಟಗಾರನಾಗಿದ್ದಾರೆ. ಪ್ರಸ್ತುತ ರಿಷಭ್ ಪಂತ್ 10ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ 729 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 862 ಅಂಕಗಳೊಂದಿಗೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಇಂಗ್ಲೆಂಡ್ ವಿರುದ್ಧದ ಶತಕ ಗಳಿಸಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಷ್ಟೇ ಅಲ್ಲದೆ, 36 ವರ್ಷದ ಎಡಗೈ ಬ್ಯಾಟರ್ ಉಸ್ಮಾನ್ ಖವಾಜಾ, ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಮತ್ತು ಒಟ್ಟಾರೆ ಏಳನೇ ಸ್ಥಾನಕ್ಕೆ ಏರಿದರು. ಆದರೆ ಇಂಗ್ಲೆಂಡ್‌ನ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಅವರು ತಮ್ಮ ಕಿರು ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಧಿಕ ಸ್ಥಾನ ಗಳಿಸಿದರು. ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಐದು ಸ್ಥಾನಗಳ ಏರಿಕೆ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಉಳಿಸಿಕೊಂಡ ಆರ್ ಅಶ್ವಿನ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಆಯ್ಕೆಯಾಗದಿದ್ದರೂ, ಭಾರತ ತಂಡದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 860 ರನ್‌ಗಳೊಂದಿಗೆ ವಿಶ್ವದ ನಂ.1 ಬೌಲರ್ ಆಗಿ ಉಳಿದಿದ್ದಾರೆ. ಇನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ 829 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ಜೋಡಿ ಒಲ್ಲಿ ರಾಬಿನ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇಬ್ಬರೂ ಅಗ್ರ 10ರಲ್ಲಿ ಒಂದು ಸ್ಥಾನ ಏರಿಕೆ ಕಂಡರು. ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಅವರು ಆಸ್ಟ್ರೇಲಿಯಾ ವಿರುದ್ಧ ಸುಮಾರು ಎರಡು ವರ್ಷಗಳ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯ ಆಡಿದ್ದು, 52ನೇ ಸ್ಥಾನದೊಂದಿಗೆ ಮರಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications