ICC test rankings: ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕೆ ಭಾರೀ ನಿರಾಸೆ: ಆಶಸ್ ಗೆದ್ದ ಆಸಿಸ್‌ಗೆ ಅಗ್ರಸ್ಥಾನ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-2 ಅಂತರದಿಂದ ಆತಿಥೆಯರಿಗೆ ಶರಣಾಗಿತ್ತು. ಈ ಟೆಸ್ಟ್ ಸರಣಿ ಸೋಲಿನಿಂದಾಗಿ ಭಾರತಕ್ಕೆ ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿಯೂ ಭಾರೀ ಹಿನ್ನಡೆಯಾಗಿದೆ. ಅಗ್ರ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಎರಡು ಸ್ಥಾನಗಳ ಕುಸಿತಕಂಡಿದ್ದು ಮೂರನೇ ಸ್ಥಾನದಲ್ಲಿದೆ. ಇತ್ತ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ 4-0 ಅಂತರದಿಂದ ಸರಣಿ ಗೆಲುವು ಸಾಧಿಸಿದ್ದು ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ 119 ಅಂಕಗಳನ್ನು ಗಳಿಸುವ ಮೂಲಕ ಭಾರತ ಹಾಗೂ ನ್ಯೂಜಿಲಂಡ್ ಎರಡು ತಂಡಗಳನ್ನು ಕೂಡ ಹಿಂದಿಕ್ಕಿದ್ದು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಆಶಸ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು.
ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್, ಅಡಿಲೇಡ್, ಮೆಲ್ಬೋರ್ನ್ ಮತ್ತು ಹೋಬರ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಡೆದ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಸಿಡ್ನಿಯಲ್ಲಿ ನಡೆದ ನಾಲ್ಕನೇ ಪಂದ್ಯವನ್ನು ಮಾತ್ರವೇ ಪ್ರವಾಸಿ ಇಂಗ್ಲೆಂಡ್ ತಂಡ ರೋಚಕ ರೀತಿಯಲ್ಲಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿತ್ತು. ಈ ಮೂಲಕ ಇಂಗ್ಲೆಂಡ್ ಈ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ.
ಮತ್ತೊಮದು ಕಡೆ ಭಾರತ ತಂಡ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಬಳಿಕ ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್‌ನಲ್ಲಿ ನಡೆದ ನಂತರದ ಎರಡು ಪಂದ್ಯಗಳಲ್ಲಿಯೂ ಸತತವಾಗಿ ಸೋಲು ಅನುಭವಿಸಿತು. ಹೀಗಾಗಿ ಭಾರತ ಸರಣಿ ಸೋಲು ಕಂಡಿದೆ. ಇನ್ನು ಆತಿಥೇಯ ದಕ್ಷಿಣ ಆಫ್ರಿಕಾ ತಂಡ ತಮ್ಮ ಸರಣಿ ಗೆಲುವಿನ ಬಳಿಕ 101 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದು ನಂ.5 ಕ್ಕೆ ತಲುಪಿದೆ.
ಇನ್ನು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡ ನ್ಯೂಜಿಲೆಂಡ್ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ 117 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಬೇ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತ ನಂತರ ಕಿವೀಸ್ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಲು ಯಶಸ್ವಿಯಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಪಾಕಿಸ್ತಾನ ತಂಡ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 93 ಅಂಕಗಳೊಂದಿಗೆ ಒಂದು ಸ್ಥಾನ ಕುಸಿತ ಕಂಡಿದ್ದು ನಂ.6ಕ್ಕೆ ಇಳಿದಿದೆ. ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಜಿಂಬಾಬ್ವೆ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಈ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಸ್ಥಾನಗಳಲ್ಲಿ ಮುಂದುವರಿದಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications