2024ರ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ, ಡಿಸೆಂಬರ್ 11ರಂದು ಪ್ರಕಟಿಸಿದೆ.
ನವೆಂಬರ್‌ನಲ್ಲಿ ಐಸಿಸಿ ಶ್ರೀಲಂಕಾದಿಂದ ಪಂದ್ಯಾವಳಿಯನ್ನು ಸ್ಥಳಾಂತರಿಸಲು ತೆಗೆದುಕೊಂಡ ನಿರ್ಧಾರದ ಬಳಿಕ, ಜನವರಿ 19ರಿಂದ ಫೆಬ್ರವರಿ 11ರವರೆಗೆ ನಡೆಸಲಾಗುವ ಟೂರ್ನಿಯ 15ನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾದ ಐದು ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ.

ವಿಶ್ವ ಕ್ರಿಕೆಟ್‌ನ ಅತ್ಯಂತ ಯುವ ಪ್ರತಿಭೆಗಳು ಅಂತಾರಾಷ್ಟ್ರೀಯ ಮೈದಾನಗಳಲ್ಲಿ ನಡೆಯುವ 41 ಪಂದ್ಯಗಳಲ್ಲಿ ಬೆಳ್ಳಿಯ ಟ್ರೋಫಿಗಾಗಿ ಸ್ಪರ್ಧಿಸಲಿದ್ದಾರೆ.
ಬ್ಲೋಮ್‌ಫಾಂಟೈನ್‌ನಲ್ಲಿನ ಮಂಗೌಂಗ್ ಓವಲ್, ಪೂರ್ವ ಲಂಡನ್‌ನ ಬಫಲೋ ಪಾರ್ಕ್, ಕಿಂಬರ್ಲಿಯಲ್ಲಿ ಕಿಂಬರ್ಲಿ ಓವಲ್, ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ಜೆಬಿ ಮಾರ್ಕ್ಸ್ ಓವಲ್‌ನಲ್ಲಿ ಲೀಗ್ ಪಂದ್ಯಗಳನ್ನು ಆಡಲಿದ್ದರೆ, ಬೆನೋನಿಯ ವಿಲೋಮೂರ್ ಪಾರ್ಕ್ ಫೆಬ್ರವರಿ 6 ಮತ್ತು 8ರಂದು ಸೆಮಿಫೈನಲ್ ಪಂದ್ಯಗಳು ಹಾಗೂ ಫೆಬ್ರವರಿ 11ರಂದು ಫೈನಲ್ ಪಂದ್ಯವನ್ನು ಆತಿಥ್ಯ ವಹಿಸಲು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಹೊಸ ವೇಳಾಪಟ್ಟಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಆರಂಭಿಕ ದಿನದಂದು ವೆಸ್ಟ್ ಇಂಡೀಸ್ ತಂಡದ ವಿರುದ್ಧ ತಮ್ಮ ಅಭಿಯಾನವನ್ನು ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ಪ್ರಾರಂಭಿಸಲಿದೆ.
ಇನ್ನು ಹಾಲಿ ಚಾಂಪಿಯನ್ ಭಾರತ ತಂಡವು ಜನವರಿ 20ರಂದು ಮಾಜಿ ಚಾಂಪಿಯನ್ ಬಾಂಗ್ಲಾದೇಶದ ವಿರುದ್ಧ ತಮ್ಮ ಪ್ರಶಸ್ತಿ ರಕ್ಷಿಸಲು ಅಭಿಯಾನ ಪ್ರಾರಂಭಿಸಲಿದೆ. ಭಾರತ ತಂಡ ಕೊನೆಯ ಬಾರಿಗೆ 2020ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದಾಗ ಟ್ರೋಫಿ ಎತ್ತಿಹಿಡಿದಿತ್ತು.
ಈ ಆವೃತ್ತಿಯ ಪಂದ್ಯಾವಳಿಯಲ್ಲಿ ಹೊಸ ಸ್ವರೂಪ ಅಳವಡಿಸಿಕೊಳ್ಳಲಾಗುತ್ತದೆ. ನಾಲ್ಕು ಗುಂಪುಗಳಲ್ಲಿ ತಲಾ ತಂಡಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು 16 ತಂಡಗಳು ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ.
ಈ ವೇಳೆ ಗುಂಪು ಹಂತಗಳಿಂದ ಮುನ್ನಡೆಯುವ ತಂಡಗಳು ಜನವರಿ 30ರಿಂದ ಹೊಸ ಸೂಪರ್ 6 ಹಂತವನ್ನು ಪ್ರವೇಶಿಸುತ್ತವೆ. ಅಲ್ಲಿ ಆರು ತಂಡಗಳ ಎರಡು ಗುಂಪುಗಳು ಸೆಮಿಫೈನಲಿಸ್ಟ್ ಮತ್ತು ನಂತರದ ಫೈನಲಿಸ್ಟ್ ನಿರ್ಧರಿಸಲು ಹಣಾಹಣಿ ನಡೆಸಲಿವೆ.
A ಗುಂಪಿನಲ್ಲಿ ಭಾರತ ತಂಡದ ಜೊತೆಗೆ ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್ಎ ತಂಡಗಳು ಸ್ಥಾನ ಪಡೆದಿವೆ.
B ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ.
C ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ತಂಡಗಳು ಕಾಣಿಸಿಕೊಂಡಿವೆ.
D ಗುಂಪಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳಿಂದ ಕೂಡಿದೆ.
ಜನವರಿ 20 - ಬಾಂಗ್ಲಾದೇಶ - ಮಂಗೌಂಗ್ ಓವಲ್, ಬ್ಲೋಮ್‌ಫಾಂಟೈನ್
ಜನವರಿ 25 - ಐರ್ಲೆಂಡ್ - ಮಂಗೌಂಗ್ ಓವಲ್, ಬ್ಲೋಮ್‌ಫಾಂಟೈನ್
ಜನವರಿ 28 - ಯುಎಸ್ಎ - ಮಂಗೌಂಗ್ ಓವಲ್, ಬ್ಲೋಮ್‌ಫಾಂಟೈನ್
ಮುಖ್ಯ ಪಂದ್ಯಾವಳಿಗೂ ಮುನ್ನ, ಪ್ರತಿ ತಂಡವು ಜನವರಿ 13 ಮತ್ತು 17ರ ನಡುವೆ ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದ ಮೈದಾನಗಳಲ್ಲಿ ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ.
ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯು ಕ್ರಿಕೆಟ್‌ನ ಕೆಲವು ಗುರುತಿಸಬಹುದಾದ ಸ್ಟಾರ್‌ಗಳಿಗೆ ಬಹಳ ಕಾಲದಿಂದಲೂ ಸ್ಪ್ರಿಂಗ್‌ಬೋರ್ಡ್ ಆಗಿ ಕೆಲಸ ಮಾಡಿದೆ.
ದಕ್ಷಿಣ ಆಫ್ರಿಕಾವು ತಮ್ಮ ಎರಡನೇ ಅಂಡರ್-19 ಟ್ರೋಫಿಯನ್ನು ಪಡೆಯಲು ಆಶಿಸುತ್ತಿದೆ. ಈ ಹಿಂದೆ 2014ರ ಪಂದ್ಯಾವಳಿಯನ್ನು ಗೆದ್ದ ನಂತರ, ಹರಿಣ ಪಡೆಯ ತಾರೆಗಳಾದ ಐಡೆನ್ ಮಾರ್ಕ್ರಾಮ್ ಮತ್ತು ಕಗಿಸೊ ರಬಾಡ ವಿಶ್ವ ವೇದಿಕೆಗೆ ತಮ್ಮ ಪರಿಚಯ ಮಾಡಿಕೊಂಡರು.
ಪಂದ್ಯಾವಳಿ ಇತಿಹಾಸದ ಮೂಲಕ, ಭಾರತ ತಂಡವು ಐದು ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮೂರು ಬಾರಿ ಪಂದ್ಯಾವಳಿಯನ್ನು ಗೆದ್ದಿದ್ದರೆ, ಪಾಕಿಸ್ತಾನ ಎರಡು ಬಾರಿ, ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು 2024ರ ಆತಿಥೇಯ ದಕ್ಷಿಣ ಆಫ್ರಿಕಾ ತಲಾ ಒಂದು ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿವೆ.