ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಆಶ್ರಯದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಗೆ ಈಗಾಗಲೇ ಎಲ್ಲ ದೇಶಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಈ ಮೆಗಾ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಟೀಮ್ ಇಂಡಿಯಾ, ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸದ ಹಿನ್ನೆಲೆಯಲ್ಲಿ, ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಭಾರತ ಕ್ರಿಕೆಟ್ ನಿಂಯತ್ರಣಾ ಮಂಡಳಿ ಇತ್ತೀಚಿಗೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ನೂತನ ಜೆರ್ಸಿಯನ್ನು ಅನಾವರಣ ಮಾಡಿದೆ. ಈ ಜೆರ್ಸಿ ಅನಾವರಣ ಆದಾಗಿನಿಂದಲೂ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬಿಸಿಸಿಐ ತನ್ನ ಜೆರ್ಸಿಯಲ್ಲಿ ಆಯೋಜಕ ದೇಶದ ಹೆಸರನ್ನು ಹಾಕಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ.

ಬಿಸಿಸಿಐ ಕೈಗೊಂಡ ಈ ತೀರ್ಮಾನಕ್ಕೆ ವಿರೋಧ ಸಹ ಕೇಳಿ ಬಂದಿತ್ತು. ಈಗ ಐಸಿಸಿ ಸಹ ಬಿಸಿಸಿಐ ನಿಲುವನ್ನು ತರಾಠೆಗೆ ತೆಗೆದುಕೊಂಡಿದೆ. ಭಾರತ ಚಾಂಪಿಯನ್ಸ್ ಟ್ರೋಫಿಯ ಜೆರ್ಸಿ ಹಾಗೂ ಕಿಟ್ ಬ್ಯಾಗ್‌ಗಳಲ್ಲಿ ಪಾಕಿಸ್ತಾನ ಎಂಬ ಪದವನ್ನು ಬರೆದಿರಿಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ, ಬಿಸಿಸಿಐಗೆ ಕಠಿಣ ಸಂದೇಶ ರವಾನಿಸಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕ್ ಆಯೋಜಿಸಲಿದೆ. ನಿಯಮಾವಳಿಗಳ ಭಾಗವಾಗಿ ಆಯೋಜಿತ ದೇಶದ ಹೆಸರನ್ನು ಕಿಟ್ ಮೇಲೆ ಹಾಕಬೇಕಾಗುತ್ತದೆ ಎಂದು ಐಸಿಸಿ, ಬಿಸಿಸಿಐಗೆ ತಿಳಿಸಿದೆ.
ಭಾರತ, ಪಾಕ್ ಪ್ರವಾಸವನ್ನು ಕೈಗೊಳ್ಳುತ್ತಿಲ್ಲ. ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಟೀಮ್ ಇಂಡಿಯಾ ಕಿಟ್ ಮೇಲೆ ಪಾಕಿಸ್ತಾನ ಎಂಬ ಹೆಸರನ್ನು ಬರೆಸಿರಲಿಲ್ಲ. ಆದರೆ ಐಸಿಸಿ ಪ್ರತಿಯೋಂದು ದೇಶವು, ತಮ್ಮ ಜೆರ್ಸಿಗಳ ಮೇಲೆ ಟೂರ್ನಮೆಂಟ್ ಲೋಗ ಹಾಗೂ ಆಯೋಜಿಸುವ ದೇಶದ ಹೆಸರನ್ನು ಮುದ್ರಿಸುವುದು ಕಡ್ಡಾಯ ಎಂದು ಐಸಿಸಿ ಅಧಿಕಾರಿಯೊಬ್ಬರು ಪಾಕಿಸ್ತಾನ ಚಾನೆಲ್‌ಗೆ ತಿಳಿಸಿದ್ದಾರೆ.
ಎಲ್ಲ ತಂಡಗಳು ಐಸಿಸಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆಟಗಾರರ ಕಿಟ್‌ಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಲೋಗೋ ಮತ್ತು ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಐಸಿಸಿ ತಿಳಿಸಿದೆ.
ಐಸಿಸಿ ನಿಯಮಗಳ ಪ್ರಕಾರ, ಐಸಿಸಿ ಟೂರ್ನಿಗಳು ಎಲ್ಲಿಯೇ ನಡೆದರೂ ಆತಿಥೇಯ ದೇಶದ ಹೆಸರನ್ನು ಜೆರ್ಸಿಯ ಮೇಲೆ ಹಾಕಬೇಕು. ಬಿಸಿಸಿಐ ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನ ಹೆಸರನ್ನು ಬರೆಯಲು ಬಯಸುವುದಿಲ್ಲ ಎಂದು ಐಎಎನ್‌ಎಸ್ ವರದಿ ಮಾಡಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತೀಯ ಮಂಡಳಿಯಿಂದ ಅಂತಹ ಯಾವುದೇ ಮಾಹಿತಿಯನ್ನು ಪಡೆದಿಲ್ಲ ಎಂದು ನಿರಾಕರಿಸಿದೆ.
ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಏಳು ವರ್ಷಗಳ ಬಳಿಕ ನಡೆಯಲಿರುವ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೂರ್ನಿಯ ಚಾಂಪಿಯನ್ ಪಟ್ಟದ ಮೇಲೆ ಟೀಮ್ ಇಂಡಿಯಾ ಕಣ್ಣು ನೆಟ್ಟಿದೆ.