ಲಂಡನ್, ಜೂನ್ 20: ಇದೇ ತಿಂಗಳ 23ರಂದು ಆರಂಭಗೊಳ್ಳಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು 139 ರಾಷ್ಟ್ರಗಳಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ತಿಳಿಸಿದೆ. ಇಷ್ಟು ರಾಷ್ಟ್ರಗಳಲ್ಲಿ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯೊಂದು ಪ್ರಸಾರವಾಗುತ್ತಿರುವುದು ಇದೇ ಮೊದಲು.
ಪಂದ್ಯಗಳಲ್ಲಿ ಉಪಯೋಗಿಸುವ ತಂತ್ರಜ್ಞಾನಗಳಲ್ಲೂ ಈ ಬಾರಿ ಹೊಸತನ ತರಲಾಗಿದ್ದು, ಲಾರ್ಡ್ಸ್ ನಲ್ಲಿ ಜುಲೈ 23ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೈಡರ್ ಕ್ಯಾಮ್ ಹಾಗೂ ಡ್ರೋನ್ ಉಪಯೋಗಿಸಲಾಗುತ್ತದೆ. ಈ ರೀತಿಯ ವ್ಯವಸ್ಥೆಯನ್ನು ಮಹಿಳೆಯರ ಕ್ರಿಕೆಟ್ ಪಂದ್ಯವೊಂದಕ್ಕೆ ಅಳವಡಿಸುತ್ತಿರುವುದೂ ಇದೇ ಮೊದಲು.

ವಿವಿಧ ಖಂಡಗಳಲ್ಲಿನ ಜನರು ಐಸಿಸಿ ಟಿವಿ ಮೂಲಕವೇ ಈ ಪಂದ್ಯಗಳನ್ನು ನೇರಪ್ರಸಾರದ ರೂಪದಲ್ಲಿ ನೋಡಬಹುದು. ಫೈನಲ್ ಪಂದ್ಯಕ್ಕೆ ಸ್ಪೈಡರ್ ಕ್ಯಾಮ್, ಡ್ರೋನ್ ಜತೆಗೆ ವಿಶೇಷ ಕ್ಯಾಮೆರಾಗಳು, 8 ಹಾಕ್-ಐ ಕ್ಯಾಮೆರಾಗಳನ್ನೂ ಉಪಯೋಗಿಸಲಾಗುತ್ತಿದೆ.
ಈ ಮೊದಲು ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗಳಿಗೆ ಇಷ್ಟೆಲ್ಲಾ ಸೌಲಭ್ಯ ನೀಡಲಾಗುತ್ತಿರಲಿಲ್ಲ. ಆದರೆ, ಈ ಬಾರಿ ಮಾತ್ರ ಮಹಿಳೆಯರ ಕ್ರಿಕೆಟ್ ಗೆ ಉತ್ತೇಜನ ನೀಡುವ ಸಲುವಾಗಿ ಇಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ.