
ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಮಹಿಳೆಯರ ತಂಡಕ್ಕೆ ಮೊದಲ ಸೋಲು ಉಂಟಾಗಿದೆ. ನ್ಯೂಜಿಲೆಂಡ್ ಮಹಿಳೆಯರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ನೀರಸ ಪ್ರದರ್ಶನದ ಕಾರಣದಿಂದಾಗಿ ಕಿವೀಸ್ ಪಡೆ ನೀಡಿದ ಗುರಿ ತಲುಪಲಾಗದೆ ಶರಣಾಗಿದೆ. ಭಾರತದ ಪರವಾಗಿ ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಮಾತ್ರವೇ ಏಕಾಂಗಿ ಹೋರಾಟವನ್ನು ನೀಡಿದರು. ಉಳಿದ ಯಾರಿಂದಲೂ ನಿರ್ಣಾಯಕ ಪ್ರದರ್ಶನ ಬಾರದ ಕಾರಣ ಭಾರತ ತಂಡ ಸೋಲು ಅನುಭವಿಸಿದೆ.
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಅದರಲ್ಲೂ ಪೂಜಾ ವಸ್ತ್ರೇಕರ್ ಅವರ ಅಮೋಘ ಬೌಲಿಂಗ್‌ನ ಕಾರಣದಿಂದಾಗಿ ಕಿವೀಸ್ ಪಡೆ 260 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು. ಪೂಜಾ ವಸ್ತ್ರೇಕರ್ 4 ವಿಕೆಟ್ ಪಡೆದರೆ ರಾಜೇಶ್ವರಿ ಗಾಯಕ್ವಾಡ್‌ಗೆ ಎರಡು ವಿಕೆಟ್‌ಗಳು ಬಿದ್ದಿತು. ಜೂಲನ್ ಗೋಸ್ವಾಮಿ ಹಾಗೂ ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಮಹಿಳಾ ತಂಡ 260 ರನ್‌ಗಳಿಸಿದೆ.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡ ಆರಂಭದಿಂದಲೇ ಮುಗ್ಗರಿಸುತ್ತಾ ಸಾಗಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 6 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ದೀಪ್ತಿ ಶರ್ಮಾ ಕೂಡ ಐದು ರನ್‌ಗಳ ಕೊಡುಗೆ ನೀಡಿ ಫೆವಿಲಿಯನ್ ಸೇರಿಕೊಂಡರು. ನಂತರ ಯಸ್ತಿಕಾ ಭಾಟಿಯಾ ಹಾಗೂ ನಾಯಕಿ ಮಿಥಾಲಿ ರಾಜ್ ಕೂಡ ದೊಡ್ಡ ಜೊತಯೆಯಾಟ ನೀಡಲು ವಿಫಲವಾದರು. ಆದರೆ ಅನುಭವಿ ಹರ್ಮನ್‌ಪ್ರೀತ್ ಕೌರ್ ಮಾತ್ರ ಭಾರತ ತಂಡದ ಪರವಾಗಿ ಏಕಾಂಗಿ ಹೋರಾಟವನ್ನು ನೀಡಿದರು.
ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ನಲ್ಲಿದ್ದು ಕಾಲವೂ ಭಾರತ ತನ್ನ ಹೋರಾಟವನ್ನು ಮುಂದುವರಿಸಿತ್ತು. ಆದರೆ ಮತ್ತೊಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪರಿಣಾಮವಾಗಿ ಕೌರ್ ಹೋರಾಟ ವ್ಯರ್ಥವಾಯಿತು. ನಂತರ ಕೌರ್ ಕೂಡ 8ನೇ ವಿಕೆಟ್ ರೂಪದಲ್ಲಿ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ಭಾರತದ ಹೋರಾಟ ಬಹುತೇಕ ಅಂತ್ಯವಾಯಿತು. 46.4 ಓವರ್‌ಗಳಲ್ಲಿ ಭಾರತ 198 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರ ಪರಿಣಾಮವಾಗಿ ಭಾರತ 62 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ನ್ಯೂಜಿಲೆಂಡ್ ಪ್ಲೇಯಿಂಗ್ XI: ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಅಮೆಲಿಯಾ ಕೆರ್, ಆಮಿ ಸ್ಯಾಟರ್ಥ್‌ವೈಟ್, ಮ್ಯಾಡಿ ಗ್ರೀನ್, ಫ್ರಾನ್ಸಿಸ್ ಮ್ಯಾಕೆ, ಕೇಟಿ ಮಾರ್ಟಿನ್ (ವಿಕೆಟ್ ಕೀಪರ್), ಹೇಲಿ ಜೆನ್ಸನ್, ಲೀ ತಹುಹು, ಜೆಸ್ ಕೆರ್, ಹನ್ನಾ ರೋವ್
ಬೆಂಚ್: ರೋಸ್ಮರಿ ಮೈರ್, ಬ್ರೂಕ್ ಹ್ಯಾಲಿಡೇ, ಫ್ರಾನ್ ಜೋನಾಸ್, ಜಾರ್ಜಿಯಾ ಪ್ಲಿಮ್ಮರ್
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಶಫಾಲಿ ವರ್ಮಾ, ಪೂನಂ ಯಾದವ್, ತನಿಯಾ ಭಾಟಿಯಾ, ರೇಣುಕಾ ಸಿಂಗ್