ICC Women's ODI Ranking: ಜನ್ಮದಿನದಂದೇ ಸಿಹಿಸುದ್ದಿ ಪಡೆದ ಸ್ಮೃತಿ ಮಂಧಾನ; ಕುಸಿತ ಕಂಡ ಹರ್ಮನ್‌ಪ್ರೀತ್
ಬುಧವಾರ, ಜುಲೈ 18ರಂದು ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ತಮ್ಮ ಜನ್ಮದಿನದಂದು 6ನೇ ಸ್ಥಾನಕ್ಕೆ ಏರಿದ್ದರೆ, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 8ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಅನುಭವಿ ಸ್ಫೋಟಕ ಬ್ಯಾಟರ್ ಸ್ಮೃತಿ ಮಂಧಾನ 704 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಎರಡು ಸ್ಥಾನ ಕುಸಿದಿರುವ ಹರ್ಮನ್‌ಪ್ರೀತ್ ಕೌರ್ 702 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
ಇನ್ನು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಬೌಲರ್‌ಗಳ ಪೈಕಿ ಅಗ್ರ 10ರಲ್ಲಿರುವ ಏಕೈಕ ಭಾರತೀಯಳಾಗಿದ್ದರೆ, ದೀಪ್ತಿ ಶರ್ಮಾ ಆಲ್‌ರೌಂಡರ್‌ಗಳ ಪೈಕಿ ಅಗ್ರ 10ರಲ್ಲಿರುವ ಏಕೈಕ ಭಾರತೀಯ ಆಟಗಾರ್ತಿಯರಾಗಿದ್ದಾರೆ.

ಈ ಇಬ್ಬರೂ ಆಟಗಾರ್ತಿಯರು ಒಂದು ಸ್ಥಾನ ಕುಸಿತ ಕಂಡಿದ್ದಾರೆ. ರಾಜೇಶ್ವರಿ ಗಾಯಕ್ವಾಡ್ 9ನೇ ಸ್ಥಾನದಲ್ಲಿದ್ದರೆ, ಆಲ್‌ರೌಂಡರ್ ದೀಪ್ತಿ ಶರ್ಮಾ 7ನೇ ಸ್ಥಾನದಲ್ಲಿದ್ದಾರೆ.
ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಶ್ರೀಲಂಕಾದ ಚಾಮರಿ ಅಥಾಪತ್ತು ಅವರ ಅಗ್ರಸ್ಥಾನವು ಕೇವಲ ಎರಡು ವಾರಗಳ ಕಾಲ ಇತ್ತು. ಏಕೆಂದರೆ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಬೆತ್ ಮೂನಿ ಇದೀಗ ಮಹಿಳಾ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಬೆತ್ ಮೂನಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಅಜೇಯ 81 ರನ್ ಮತ್ತು 33 ರನ್‌ಗಳೊಂದಿಗೆ ಉತ್ತಮವಾಗಿ ಆಡಿದರು. ಇದೇ ವೇಳೆ ಆಸ್ಟ್ರೇಲಿಯಾ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವಿನೊಂದಿಗೆ ಆಶಸ್ ಸರಣಿಯನ್ನು ಮರಳಿ ಪಡೆಯಿತು.
ಬೆತ್ ಮೂನಿ ನಂತರದ ಸ್ಥಾನದಲ್ಲಿ ಇಂಗ್ಲೆಂಡ್‌ನ ನ್ಯಾಟ್ ಸ್ಕೈವರ್-ಬ್ರಂಟ್ ಇದ್ದಾರೆ. ಅವರು ಎರಡು ಸ್ಥಾನಗಳ ಮೇಲಕ್ಕೇರಿ ನಂ.2 ಮತ್ತು ವೃತ್ತಿಜೀವನದ ಅತ್ಯುತ್ತಮ 763 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ.
ಬ್ರಿಸ್ಟಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಗೆಲುವಿನಲ್ಲಿ ಸ್ಟಾರ್ ಆಲ್‌ರೌಂಡರ್ ನ್ಯಾಟ್ ಸ್ಕೈವರ್-ಬ್ರಂಟ್ ಬೌಲಿಂಗ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇದೇ ವೇಳೆ ನ್ಯಾಟ್ ಸ್ಕೈವರ್-ಬ್ರಂಟ್ ಅವರ ಆಲ್‌ರೌಂಡ್ ಪ್ರದರ್ಶನಗಳು ಏಕದಿನ ಪಂದ್ಯಗಳಲ್ಲಿ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಇದರಲ್ಲಿ ವೃತ್ತಿಜೀವನದ ಅತ್ಯುತ್ತಮ 402 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದರು.
ಮೊದಲ ಏಕದಿನ ಪಂದ್ಯದಲ್ಲಿ ಹೀಥರ್ ನೈಟ್ ಫಿನಿಶಿಂಗ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅಜೇಯ 75 ರನ್ ಗಳಿಸಿ ತಮ್ಮ ತಂಡವನ್ನು ಗೆಲ್ಲಿಸಿದರು.
ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ 14 ಸ್ಥಾನಕ್ಕೆ ತಲುಪಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಸಹ ಅದೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಪ್ರಮುಖ ಆಲ್‌ರೌಂಡರ್ ಆಶ್ ಗಾರ್ಡ್ನರ್ ಬ್ಯಾಟ್ ಮತ್ತು ಚೆಂಡಿನೊಂದಿಗೆ ಅದ್ಭುತ ಪ್ರದರ್ಶನಗಳೊಂದಿಗೆ ಏಕದಿನ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.
ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ತಲಾ 54 ರನ್ ಮತ್ತು ಮೂರು ವಿಕೆಟ್‌ಗಳೊಂದಿಗೆ ಆಶ್ ಗಾರ್ಡ್ನರ್ ಬೌಲರ್‌ಗಳ ಪಟ್ಟಿಯಲ್ಲಿ 4 ಸ್ಥಾನಗಳ ಏರಿಕೆ ಕಂಡು ವೃತ್ತಿಜೀವನದ ಅತ್ಯುತ್ತಮ 631 ರೇಟಿಂಗ್ ಪಾಯಿಂಟ್ ಗಳಿಸಿದ್ದರೆ, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 2 ಸ್ಥಾನಗಳ ಏರಿಕೆ ಕಂಡು 330 ರೇಟಿಂಗ್ ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications