ಏಕದಿನ ವಿಶ್ವಕಪ್ 2023 ಮುಗಿದು ದಿನಗಳೇ ಕಳೆದಿವೆ. ಅಭಿಮಾನಿಗಳಿಗೆ ಭಾರತ ಕ್ರಿಕೆಟ್ ತಂಡ ಕಪ್ ಗೆಲ್ಲುವಲ್ಲಿ ವಿಫಲವಾದ ನಿರಾಸೆ ಇದೆ. ಆದರೆ ಇದೇ ವಿಶ್ವಕಪ್ ನಲ್ಲಿ ಭಾರತೀಯ ಆಟಗಾರರು ಸಿಡಿಸಿದ ಶತಕ ಅಭಿಮಾನಿಗಳನ್ನು ಸೆಳೆದಿದೆ.
ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. 241 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆಸೀಸ್ ಇನ್ನು 42 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದಿತು. ಈ ಮೂಲಕ ಮೂರನೇ ಬಾರಿ ವಿಶ್ವಕಪ್ ಎತ್ತುವ ಟೀಮ್ ಇಂಡಿಯಾ ಆಸೆ ಮಣ್ಣು ಪಾಲಾಯಿತು.

ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ಒಟ್ಟು ನಾಲ್ಕು ಭಾರತೀಯ ಆಟಗಾರರು ಏಳು ಶತಕಗಳನ್ನು ಸಿಡಿಸಿದ್ದಾರೆ. ಈ ಶತಕಗಳು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿವೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, 2023ರ ವಿಶ್ವಕಪ್ ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಹಿಟ್ ಮ್ಯಾನ್ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದರು. ರೋಹಿತ್ 84 ಎಸೆತಗಳಲ್ಲಿ 16 ಬೌಂಡರಿ, 5 ಸಿಕ್ಸರ್ ಸಹಾಯದಿಂದ 131 ರನ್ ಸಿಡಿಸಿದ್ದರು. ಈ ಮೂಲಕ ರೋಹಿತ್ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಪ್ರಸಕ್ತ ವಿಶ್ವಕಪ್ ನಲ್ಲಿ ಭರ್ಜರಿ ಪಾರ್ಮ್ ನಲ್ಲಿದ್ದರು. ಇವರು ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಮೊದಲ ಬಾರಿಗೆ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಇನ್ನಿಂಗ್ಸ್ ನಲ್ಲಿ ಆರು ಬೌಂಡರಿ, ನಾಲ್ಕು ಸಿಕ್ಸರ್ ಸೇರಿವೆ.
ಲೀಗ್ ಹಂತದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ವಿರಾಟ್ ಅಬ್ಬರಿಸಿದ್ದರು. ಈ ಇನಿಂಗ್ಸ್ ನಲ್ಲಿ ವಿರಾಟ್ 101 ರನ್ ಸಿಡಿಸಿದ್ದರು. ಈ ಶತಕ ವಿರಾಟ್ ಕೊಹ್ಲಿ ಅಭಿಮಾನಿಗಳ ಮನಸ್ಸಿನಲ್ಲಿ ಹಲವು ವರ್ಷಗಳ ಕಾಲ ಉಳಿಯುತ್ತದೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸಹ, ಟೂರ್ನಿಯಲ್ಲಿ ಸೊಗಸಾದ ಫಾರ್ಮ್ ನಲ್ಲಿ ಕಾಣಿಸಿಕೊಂಡರು. ಶ್ರೇಯಸ್ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 94 ಎಸೆತಗಳಲ್ಲಿ 128 ರನ್ ಸಿಡಿಸಿದ್ದರು.