
ಬೆಂಗಳೂರು; ಏಪ್ರಿಲ್ 16, 2019: ಏಕದಿನ ಕ್ರಿಕೆಟ್‌ನಲ್ಲಿ 47ರ ಸರಾಸರಿ ಹೊಂದಿದ್ದರೂ ಮುಂಬರುವ ಒಡಿಐ ಕ್ರಿಕೆಟ್ ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸದ ಅಂಬಾಟಿ ರಾಯುಡು, ಇದೀಗ ವಿಶ್ವಕಪ್ ವೀಕ್ಷಣೆಗೆ 3ಡಿ ಕನ್ನಡಕ ತರಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ಮೂಲದ ಅನುಭವಿ ಬ್ಯಾಟ್ಸ್‌ಮನ್ 33 ವರ್ಷದ ರಾಯುಡು, ವಿಶ್ವಕಪ್ ವೀಕ್ಷಿಸಲು ಸಲುವಾಗಿ ಈಗಷ್ಟೆ ಹೊಸ 3ಡಿ ಕನ್ನಡಕಗಳನ್ನುಆರ್ಡರ್ ಮಾಡಿದ್ದೇನೆಂದು ಟ್ವೀಟ್ ಮಾಡಿದ್ದಾರೆ.
ಅಂಬಾಟಿ ರಾಯುಡು ಬದಲಾಗಿ ಆಲ್‌ರೌಂಡರ್ ವಿಜಯ್ ಶಂಕರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಹೇಳಿದ್ದರು. ಅಲ್ಲದೆ ವಿಜಯ್ ಶಂಕರ್ ಆಯ್ಕೆ ಸಮಿತಿ ಎದುರು ತ್ರಿ ಡೈಮೆನ್ಷನ್ ಆಯ್ಕೆಯಾಗಿ ಕಂಡರು ಎಂದು ಹೇಳಿರುವ ಪ್ರಸಾದ್‌ಗೆ ಇದೀಗ ರಾಯುಡು ಟ್ವಿಟರ್ ಮೂಲಕ ಅಣಕಿಸಿದ್ದಾರೆ.
ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ
"ರಾಯುಡು ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇತ್ತು. ಆದರೆ ವಿಜಯ್ ಶಂಕರ್ ನಮ್ಮೆದುರು 3 ಡೈಮೆನ್ಷನ್ ಆಯ್ಕೆಯಾಗಿ ಕಂಡರು. ವಿಜಯ್ ಉತ್ತಮ ಬ್ಯಾಟ್ಸ್‌ಮನ್ ಹಾಗೆಯೇ ಮೋಡ ಮುಚ್ಚಿದ ವಾತಾವರಣದಲ್ಲಿ ಉತ್ತಮ ಬೌಲಿಂಗ್ ಸಂಘಟಿಸಬಲ್ಲರು. ಜೊತೆಗೆ ಉತ್ತಮ ಕ್ಷೇತ್ರ ರಕ್ಷಕ ಕೂಡ. ಹೀಗಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ವಿಜಯ್ ಸೂಕ್ತ ಆಟಗಾರ,'' ಎಂದು ಮುಂಬರುವ ವಿಶ್ವಕಪ್‌ಗೆ ಭಾರತ ತಂಡವನ್ನು ಸೋಮವಾರ ಪ್ರಕಟಿಸಿದ ಬಳಿಕ ಮಾತನಾಡಿದ ಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಏಕದಿನ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರಾಯುಡು, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಪರದಾಟ ನಡೆಸಿದ್ದಾರೆ. ಅದರಲ್ಲೂ ಕಳೆದ ಮೂರು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ಕ್ರಮವಾಗಿ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಎದುರು ದಿಟ್ಟ ಆಟವಾಡಿ ಆಯ್ಕೆದಾರರ ಗಮನ ಸೆಳೆಲು ವಿಫಲರಾಗಿದ್ದರು.
ಆದರೂ, 4ನೇ ಕ್ರಮಾಂಕದಲ್ಲಿ ರಾಯುಡು ಅವರ ಸಮಗ್ರ ಪ್ರದರ್ಶನ ಉತ್ತಮವಾಗಿದೆ. ಏಕದಿನದಲ್ಲಿ55 ಪಂದ್ಯಗಳಿಂದ ಒಟ್ಟಾರೆ 1694 ರನ್‌ಗಳನ್ನು ಗಳಿಸಿರುವ ಅವರು 10 ಅರ್ಧಶತಕಗಳು ಮತ್ತು 3 ತಕಗಳನ್ನು ದಾಖಲಿಸಿದ್ದಾರೆ.
ಕಳೆದ ಏಷ್ಯಾ ಕಪ್ ಟೂರ್ನಿಯಿಂದ ಭಾರತ ತಂಡದ ನಂ.4 ಬ್ಯಾಟ್ಸ್‌ಮನ್ ಆಗಿದ್ದ ರಾಯುಡು ಅಂದಿನಿಂದ ಈವರೆಗೆ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನುಬಾರಿಸಿದ್ದಾರೆ. ಇದೇ ವೇಳೆ ವಿಶ್ವಕಪ್ ತಂಡದಿಂದ ರಾಯುಡು ಅವರನ್ನು ಕೈಬಿಟ್ಟಿರುವ ವಿಚಾರವಾಗಿ ಗೌತಮ್ ಗಂಭೀರ್ ಮತ್ತು ಹರ್ಷ ಬೋಗ್ಲೆ ಸೇರಿದಂತೆ ಮೊದಲಾದವರು ಬೇಸರ ವ್ಯಕ್ತ ಪಡಿಸಿದ್ದಾರೆ.