ವಿಶ್ವಕಪ್: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ತುಟಿ ಬಿಚ್ಚಿದ ರೋಹಿತ್ ಶರ್ಮಾ

ಲಂಡನ್, ಮೇ 24: ಲೋಕಸಭಾ ಚುನಾವಣಾ ಕದನ ಮೇ 23ರ ಫಲಿತಾಂಶದೊಂದಿಗೆ ಕೊನೆಗೊಂಡಿದೆ (ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದಿಷ್ಟು ದಿನ ಕದನ ಮುಂದುವರೆದೀತು; ಅದನ್ನು ಬದಿಗಿಡೋಣ). ಇನ್ನು ನಮ್ಮ ಚಿತ್ತ ಐಸಿಸಿ ವಿಶ್ವಕಪ್ ನತ್ತ ಸಾಗಲಿದೆ. ಅದರಲ್ಲೂ ಟೀಮ್ ಇಂಡಿಯಾ ಪಂದ್ಯಗಳ ಫಲಿತಾಂಶ ನಮ್ಮಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ನಡೆಯಲಿರುವ ವಿಶ್ವಕಪ್ ಮಟ್ಟದ ಅದ್ದೂರಿ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಕರ್ಷಣೆ ಮೂಡಿಸಲಿದೆ. ಬಲಿಷ್ಠ 10 ಕ್ರಿಕೆಟ್ ತಂಡಗಳ ನಡುವಿನ ಕಾದಾಟ ಶುರುವಾಗೋಕೂ ಮುನ್ನ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ, ನಾಯಕ ಕೊಹ್ಲಿ ನಾಯಕತ್ವದ ಬಗ್ಗೆ ಬಾಯ್ಬಿಚ್ಚಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಸಂದರ್ಶನವೊಂದರಲ್ಲಿ ಮಾತನಾಡುತ್ತ ರೋಹಿತ್ ಶರ್ಮಾ, 'ಕೊಹ್ಲಿ ಶ್ರೇಷ್ಠ ತಂಡವನ್ನು ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ತಂಡವನ್ನು ಉತ್ತಮ ರೀತಿಯಲ್ಲೇ ಅವರು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ ಗೆ ಸಂಬಂಧಿಸಿ ನಮ್ಮ ತಂಡ ಸಮತೋಲನದಲ್ಲಿದೆ' ಎಂದರು.
'ತಂಡದ ಉಪನಾಯಕ ಜವಾಬ್ದಾರಿ ಹೊತ್ತಿರುವುದಕ್ಕೆ ನನಗೆ ಸಂತೋಷವಿದೆ. ನಾಯಕ ಕೊಹ್ಲಿಗೆ ನನ್ನ ಸಹಾಯ ಬೇಕಾದಾಗೆಲ್ಲ ನಾನು ನೆರವು ನೀಡುವೆ. ಕೊಹ್ಲಿ ಏನೇ ಹೇಳಿದರೂ ನಾನದನ್ನು ಮಾಡಲು ಸಿದ್ಧ. ಯಾಕೆಂದರೆ ನನ್ನ ತಂಡವೇ ನನಗೆ ಮುಖ್ಯ' ಎಂದು ವಿಶ್ವಕಪ್‌ನಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡುತ್ತ ಶರ್ಮಾ ಹೇಳಿಕೊಂಡಿದ್ದಾರೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿ ರೋಹಿತ್ ಸೈ ಎನಿಸಿಕೊಂಡಿದ್ದರು. ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದಿದ್ದ ಏಷ್ಯಾ ಕಪ್ ವೇಳೆ ಕೊಹ್ಲಿ ವಿಶ್ರಾಂತಿಯಲ್ಲಿದ್ದಾಗ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಈ ವೇಳೆ ಒಂದೂ ಪಂದ್ಯದಲ್ಲಿ ಸೋಲದೆ ಭಾರತ ಚಾಂಪಿಯನ್ ಆಗಿ ಬೀಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications