
ನವದೆಹಲಿ, ಜೂನ್ 4: ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಕೇಸರಿ ಬಣ್ಣದ ಜೆರ್ಸಿ ಧರಿಸಿ ಪಂದ್ಯವನ್ನಾಡಲಿದೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿತ್ತು. ಕ್ರಿಕೆಟ್ ಪ್ರೇಮಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದ್ದಿ ಹಬ್ಬಿಸಿದ್ದರು. ಆದರೆ ಟೀಮ್ ಇಂಡಿಯಾ ಈ ವಿಶ್ವಕಪ್‌ನಲ್ಲಿ ಕೇಸರಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕಿಳಿಯುವ ವಿಚಾರ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್‌ಎಸ್) ಇತ್ತೀಚಿನ ಸುದ್ದಿಯಲ್ಲಿ ಈ ವಿಚಾರವನ್ನು ತಿಳಿಸಿದೆ. ಐಎಎನ್‌ಎಸ್ ಪ್ರಕಟಿಸಿರುವ ಸುದ್ದಿಯ ಪ್ರಕಾರ ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಧರಿಸಲಿರುವ ಬದಲಿ ಜೆರ್ಸಿ ಗಾಢ ಕೇಸರಿ ಬಣ್ಣದಿಂದ ಕೂಡಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿನ ಪ್ರಿಂಟ್ ಗಾಢ ನೀಲಿ ಬಣ್ಣದಲ್ಲಿ ಇರಲಿವೆ.
ಭಾರತ ತಂಡ ಈ ನೂತನ ಜೆರ್ಸಿಯನ್ನು ವಿಶ್ವಕಪ್‌ನ ಎರಡು ಪಂದ್ಯಗಳಿಗೆ ಮಾತ್ರ ಧರಿಸಲಿದೆ. ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧ ಮತ್ತು ಜೂನ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬಳಗ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಮಿಂಚಲಿದೆ. ಜುಲೈ 6ರಂದು ಶ್ರೀಲಂಕಾ ಸವಾಲು ಸ್ವೀಕರಿಸುವ ಭಾರತ, ಆ ದಿನದಿಂದ ಮತ್ತೆಲ್ಲಾ ಪಂದ್ಯಗಳಿಗೂ ಮಾಮೂಲಿ ನೀಲಿ ಜೆರ್ಸಿ ತೊಡಲಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೊಸ ನಿಯಮದ ಪ್ರಕಾರ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಎರಡು ರೀತಿಯ ಜೆರ್ಸಿ ಧರಿಸಲೇಬೇಕು. ಹೀಗಾಗಿ ಎಲ್ಲಾ 9 ತಂಡಗಳು ಬದಲಿ ಜೆರ್ಸಿಗಳೊಂದಿಗೆ ಮೈದಾನಕ್ಕಿಳಿಯಲಿವೆ. ಪಾಕಿಸ್ತಾನ ತಂಡ ಮಾತ್ರ ಎಂದಿನ ಸಾಂಪ್ರದಾಯಿಕ ಜೆರ್ಸಿಯನ್ನೇ ಟೂರ್ನಿಯುದ್ಧಕ್ಕೂ ಧರಿಸಲು ಅನುಮತಿ ಪಡೆದುಕೊಂಡಿದೆ.