
ಮ್ಯಾನ್ಚೆಸ್ಟರ್, ಜೂನ್ 27: ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ಹಿರಿಮೆಯ ಗರಿ ಸೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 20,000 ರನ್ ಬಾರಿಸಿದ ವಿಶ್ವದ ಆಟಗಾರರಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಗುರುವಾರ (ಜೂನ್ 27) ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ vs ಭಾರತ ಪಂದ್ಯದಲ್ಲಿ ಕೊಹ್ಲಿ 72 ರನ್ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಈ ಸಾಧನೆಯೊಂದಿಗೆ ಕೊಹ್ಲಿ ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ವೆಸ್ಟ್ ಇಂಡೀಸ್ vs ಭಾರತ, ಜೂನ್ 27, Live ಸ್ಕೋರ್‌ಕಾರ್ಡ್
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 20,000 ರನ್ ಗಳಿಸಿ, ಸಚಿನ್ ಮತ್ತು ಲಾರಾ ದಾಖಲೆ ಸರಿಗಟ್ಟಲು ಕೊಹ್ಲಿಗೆ ಕೇವಲ 37 ರನ್‌ಗಳ ಅಗತ್ಯವಿತ್ತು. ಈಗಾಗಲೇ ಕೊಹ್ಲಿ ಏಕದಿನದಲ್ಲಿ ಅತಿ ವೇಗದ 10,000 ರನ್ ದಾಖಲೆ ಬರೆದಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20 ಸೇರಿ) 20,000 ರನ್ ಗಳಿಸಲು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ಮತ್ತು ವೆಸ್ಟ್ ಇಂಡೀಸ್‌ನ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾಗೆ 453 ಇನ್ನಿಂಗ್ಸ್‌ಗಳು ಬೇಕಾಗಿದ್ದವು. ಆದರೆ ಕೊಹ್ಲಿ ಹೊಸ ಮೈಲಿಗಲ್ಲ ಸ್ಥಾಪಿಸಲು ಕೇವಲ 417 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ.
ಇಂಟರ್ ನ್ಯಾಷನಲ್ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 20 ಸಾವಿರ ರನ್ ಬಾರಿಸಿದ ಆಟಗಾರರ ಸಾಲಿನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ಲಾರಾ ಮತ್ತು ಸಚಿನ್ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 4ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ (464 ಇನ್ನಿಂಗ್ಸ್), 5ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (483 ಇನ್ನಿಂಗ್ಸ್) ಇದ್ದಾರೆ.