ಬುಧವಾರ, ಅಕ್ಟೋಬರ್ 25ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿದೆ.
ನೆದರ್ಲ್ಯಾಂಡ್ಸ್ ವಿರುದ್ಧದ ಈ ಗೆಲುವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್‌ಗಳ ಅಂತರದಿಂದ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಭಾರತ ತಂಡ ಶ್ರೀಲಂಕಾ ವಿರುದ್ಧ 317 ರನ್‌ಗಳಿಂದ ಗೆಲುವು ಸಾಧಿಸಿರುವುದು ವಿಶ್ವದಾಖಲೆಯಾಗಿ ಉಳಿದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 399 ರನ್‌ಗಳನ್ನು ಕಲೆಹಾಕಿತು.
400 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡದ ಯಾವೊಬ್ಬ ಬ್ಯಾಟರ್‌ಗಳು ಪ್ರತಿರೋಧ ಒಡ್ಡದ ಫಲವಾಗಿ 21 ಓವರ್‌ಗಳಲ್ಲಿ ಕೇವಲ 90 ರನ್‌ಗಳಿಗೆ ಸರ್ವಪತನ ಕಂಡು 309 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಚೇಸಿಂಗ್ ವೇಳೆ ನೆದರ್ಲ್ಯಾಂಡ್ಸ್ ತಂಡದ ಆರಂಭಿಕ ವಿಕ್ರಮ್‌ಜಿತ್ ಸಿಂಗ್ ಅವರ 25 ರನ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್‌ಗಳು ಕನಿಷ್ಠ 15 ರನ್ ದಾಟಲಿಲ್ಲ. ಮ್ಯಾಕ್ಸ್ ಓ'ಡೌಡ್ 6 ರನ್ ಗಳಿಸಿ ಔಟಾಗುವ ಮೂಲಕ ನೆದರ್ಲ್ಯಾಂಡ್ಸ್ ತಂಡದ ವಿಕೆಟ್ ಪತನಕ್ಕೆ ಮುನ್ನುಡಿ ಬರೆದರು.

ಕಾಲಿನ್ ಅಕರ್ಮನ್ 10 ರನ್, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ 11 ರನ್, ಬಾಸ್ ಡಿ ಲೀಡೆ 4 ರನ್, ಸ್ಕಾಟ್ ಎಡ್ವರ್ಡ್ಸ್ 12 ರನ್, ತೇಜ ನಿಡಮನೂರು 14 ರನ್, ಆರ್ಯನ್ 1 ರನ್ ಉಳಿದ ಬ್ಯಾಟರ್‌ಗಳು ಖಾತೆ ತೆರೆಯಲಿಲ್ಲ.
ಇನ್ನು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಮ್ ಝಂಪಾ 3 ಓವರ್‌ಗಳಲ್ಲಿ 8 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರೆ, ಮಿಚೆಲ್ ಮಾರ್ಷ್ 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಲಾಗಲಿಲ್ಲ. ಏಕೆಂದರೆ, ಮಿಚೆಲ್ ಮಾರ್ಷ್ ಕೇವಲ 9 ರನ್ ಗಳಿಸಿ ಔಟಾದರು.

ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 2ನೇ ವಿಕೆಟ್‌ಗೆ 132 ರನ್‌ಗಳ ಜೊತೆಯಾಟ ನಿರ್ಮಿಸಿದರು. ಸ್ಟೀವನ್ ಸ್ಮಿತ್ 68 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 71 ರನ್ ಗಳಿಸಿ ಔಟಾದರು.
ಬಳಿಕ ಕ್ರೀಸ್‌ಗೆ ಆಗಮಿಸಿದ ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ನೆದರ್ಲ್ಯಾಂಡ್ಸ್ ಬೌಲರ್‌ಗಳನ್ನು ಕಾಡಿದರು ಮತ್ತು 47 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 62 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಬ್ಯಾಟಿಂಗ್‌ಗೆ ಬಂದ ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಗಳಿಸಿ ಔಟಾದರು. ಇನ್ನು ಆರಂಭಿಕ ಡೇವಿಡ್ ವಾರ್ನರ್ ಸತತ ಎರಡನೇ ಶತಕ ಬಾರಿಸಿದರು. 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 104 ರನ್ ಬಾರಿಸಿದರು.

ಇನ್ನು ಕೊನೆಯಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಭರ್ಜರಿ ಶತಕದ ನೆರವಿನೊಂದಿಗೆ 106 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ಇನ್ನು ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 8 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ಪರ ಲೋಗನ್ ವ್ಯಾನ್ ಬೀಕ್ 10 ಓವರ್‌ಗಳಲ್ಲಿ 74 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಬಾಸ್ ಡಿ ಲೀಡ್ 10 ಓವರ್‌ಗಳಲ್ಲಿ 115 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಆರ್ಯನ್ ದತ್ 1 ವಿಕೆಟ್ ಪಡೆದರು.