World Cup 2023: ರಚಿನ್ ರವೀಂದ್ರ ಶತಕ ವ್ಯರ್ಥ; ರೋಚಕ ಹೋರಾಟ ನೀಡಿ ಆಸೀಸ್ ವಿರುದ್ಧ ಸೋತ ಕಿವೀಸ್
ಶನಿವಾರ, ಅಕ್ಟೋಬರ್ 28ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 27ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸತತ ಮೂರನೇ ಗೆಲುವು ಸಾಧಿಸಿ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡರೆ, ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡ ಸತತ ಎರಡನೇ ಸೋಲು ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಧರ್ಮಶಾಲಾದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದರು. ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 49.2 ಓವರ್‌ಗಳಲ್ಲಿ 388 ರನ್‌ಗಳಿಗೆ ಸರ್ವಪತನ ಕಂಡಿತು.
ಆಸ್ಟ್ರೇಲಿಯಾ ನೀಡಿದ್ದ 389 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಿ ಕೇವಲ 5 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.
ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಬ್ಯಾಟಿಂಗ್ ಆರಂಭಿಸಿದ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ 17 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿದ್ದ ಡೆವೊನ್ ಕಾನ್ವೆ ಔಟಾದರೆ, ನಂತರ ವಿಲ್ ಯಂಗ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಕ್ರೀಸ್‌ಗೆ ಬಂದ ರಚಿನ್ ರವೀಂದ್ರ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು ಮತ್ತು 89 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 116 ರನ್ ಬಾರಿಸಿದರು. ಇನ್ನು ಡೇರಿಲ್ ಮಿಚೆಲ್ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿ ಔಟಾದರು.
ನಾಯಕ ಟಾಮ್ ಲ್ಯಾಥಮ್ 22 ಎಸೆತಗಳಲ್ಲಿ 2 ಬೌಂಡರಿ ಮೂಲಕ 21 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 12 ರನ್ ಗಳಿಸಿ ವಿಕೆಟ್ ನೀಡಿದರು. ಕೊನೆಯಲ್ಲಿ ಅಬ್ಬರಿಸಿದ ಜಿಮ್ಮಿ ನೀಶಾಮ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 58 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ ಅವರು ರನೌಟ್ ಆಗುತ್ತಿದ್ದಂತೆ ನ್ಯೂಜಿಲೆಂಡ್ ಸೋಲು ಪಕ್ಕಾ ಆಯಿತು.
ಉಳಿದಂತೆ ಮಿಚೆಲ್ ಸ್ಯಾಂಟ್ನರ್ 17 ರನ್, ಮ್ಯಾಟ್ ಹೆನ್ರಿ 9 ರನ್, ಟ್ರೆಂಟ್ ಬೌಲ್ಟ್ 10 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 19 ರನ್‌ಗಳು ಬೇಕಾಗಿದ್ದಾಗ ಮಿಚೆಲ್ ಸ್ಟಾರ್ಕ್ ವೈಡ್ ಮತ್ತು ಬೌಂಡರಿ ನೀಡುವ ಮೂಲಕ ನ್ಯೂಜಿಲೆಂಡ್ ಪಾಳಯದಲ್ಲಿ ನಗೆ ಮೂಡಿತ್ತು. ಜಿಮ್ಮಿ ನೀಶಾಮ್ ರನೌಟ್ ಗೆಲುವಿನ ಆಸೆಗೆ ತಣ್ಣೀರೆರಚಿತು.

ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಮ್ ಝಂಪಾ 10 ಓವರ್‌ಗಳಲ್ಲಿ 74 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಪ್ಯಾಟ್ ಕಮ್ಮಿನ್ಸ್ 10 ಓವರ್‌ಗಳಲ್ಲಿ 66 ರನ್ ನೀಡಿ 2 ವಿಕೆಟ್ ಪಡೆದರು. ಜೋಶ್ ಹೇಝಲ್‌ವುಡ್ 9 ಓವರ್‌ಗಳಲ್ಲಿ 70 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್ 10 ಓವರ್‌ಗಳಲ್ಲಿ 62 ರನ್ ನೀಡಿ 1 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಆಸ್ಟ್ರೇಲಿಯಾ ಕೇವಲ 4.1 ಓವರ್ ಗಳಲ್ಲಿ 50 ರನ್ ಕಲೆಹಾಕಿತು. 8.5 ಓವರ್ ಗಳಲ್ಲೇ 100 ರನ್‌ಗಳನ್ನು ಗಳಿಸಿದ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿತ್ತು.
ಡೇವಿಡ್ ವಾರ್ನರ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು. ಕೇವಲ 65 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 81 ರನ್ ಗಳಿಸಿ ಔಟಾದರು. ನೆದರ್ಲ್ಯಾಂಡ್ಸ್ ವಿರುದ್ಧ ಶತಕ ಗಳಿಸಿದ್ದ ವಾರ್ನರ್ ಇಂದು ಸತತ ಮೂರನೇ ಶತಕ ತಪ್ಪಿಸಿಕೊಂಡರು.

ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡವನ್ನು ಸೇರಿಕೊಂಡ ಟ್ರಾವಿಸ್ ಹೆಡ್ ತಮ್ಮ ಏಕದಿನ ವಿಶ್ವಕಪ್‌ನ ಮೊದಲ ಶತಕ ಗಳಿಸಿ ಅಬ್ಬರಿಸಿದರು. ಕೇವಲ 67 ಎಸೆತಗಳಲ್ಲಿ 10 ಬೌಂಡರಿ 7 ಸಿಕ್ಸರ್ ಸಹಿತ 109 ರನ್ ಗಳಿಸಿ ಔಟಾದರು.
ನಂತರ ಬಂದ ಮಿಚೆಲ್ ಮಾರ್ಷ್ 36 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 18 , ಮಾರ್ನಸ್ ಲ್ಯಾಬುಸ್ಚಾಗ್ನೆ 18 ರನ್ ಗಳಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 5 ಬೌಂಡರಿ ಎರಡು ಸಿಕ್ಸರ್ ಸಹಿತ 41 ರನ್ ಗಳಿಸಿ ಔಟಾದರು.
ಜೋಶ್ ಇಂಗ್ಲಿಸ್ 28 ಎಸೆತಗಳಲ್ಲಿ 38 ರನ್ ಗಳಿಸಿದರೆ, ಆಯಕ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 37 ರನ್ ಗಳಿಸಿ ಮಿಂಚಿದರು.
ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 3 ಕಬಳಿಸಿದರೆ, ಟ್ರೆಂಟ್ ಬೌಲ್ಟ್ ಕೂಡ 3 ವಿಕೆಟ್ ಪಡೆದರು ಮತ್ತು ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಮತ್ತು ಜಿಮ್ಮಿ ನೀಶಾಮ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications