World Cup 2023: ಡಚ್ಚರ ವಿರುದ್ಧ ಗೆದ್ದು ನಗೆ ಬೀರಿದ ಇಂಗ್ಲೆಂಡ್; ಸೋತು ವಿಶ್ವಕಪ್‌ನಿಂದ ಹೊರಬಿದ್ದ ನೆದರ್ಲ್ಯಾಂಡ್
ಬುಧವಾರ, ನವೆಂಬರ್ 8ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 40ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ 160 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಈ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಗೆಲುವು ದಾಖಲಿಸಿತು ಮತ್ತು ಸೋತ ನೆದರ್ಲ್ಯಾಂಡ್ಸ್ ತಂಡವು ಅಧಿಕೃತವಾಗಿ ವಿಶ್ವಕಪ್‌ನಿಂದ ಹೊರಬಿದ್ದಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ಬೆನ್ ಸ್ಟೋಕ್ಸ್ ಅವರ ಭರ್ಜರಿ ಶತಕದ ಸಹಾಯದಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿತು.
340 ರನ್‌ಗಳ ಬೃಹತ್ ಗುರಿ ಪಡೆದ ನೆದರ್ಲ್ಯಾಂಡ್ಸ್ ತಂಡದ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳ ಬಲೆಗೆ ಬಿದ್ದು 37.2 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿತು.
ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವೆಸ್ಲಿ ಬ್ಯಾರೆಸಿ ಮತ್ತು ಮ್ಯಾಕ್ಸ್ ಓ'ಡೌಡ್ ಉತ್ತಮ ಆರಂಭ ನೀಡುವಲ್ಲಿ ಮತ್ತೊಮ್ಮೆ ವಿಫಲರಾದರು. ತಂಡದ ಮೊತ್ತ 12 ರನ್‌ಗಳಾಗಿದ್ದಾಗ ಮ್ಯಾಕ್ಸ್ ಓ'ಡೌಡ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಕಾಲಿನ್ ಅಕರ್ಮನ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು.

ಈ ವೇಳೆ ವೆಸ್ಲಿ ಬ್ಯಾರೆಸಿ ಸೇರಿಕೊಂಡ ಸೈಬ್ರಾಂಡ್ ಎಂಗಲ್ಬ್ರೆಕ್ಟ್ 3ನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನೀಡಿ ಕುಸಿದಿದ್ದ ತಂಡಕ್ಕೆ ಆಸರೆಯಾದರು. ಆದರೆ, ತಂಡದ ಸ್ಕೋರ್ 68 ರನ್‌ಗಳಾಗಿದ್ದಾಗ ವೆಸ್ಲಿ ಬ್ಯಾರೆಸಿ 62 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 37 ರನ್ ಗಳಿಸಿ ಔಟಾದರು.
ಇನ್ನು ನಾಯಕ ಸ್ಕಾಟ್ ಎಡ್ವರ್ಡ್ಸ್ 42 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸೈಬ್ರಾಂಡ್ ಎಂಗಲ್ಬ್ರೆಕ್ಟ್ 49 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 33 ರನ್ ಕಲೆಹಾಕಿದರು.
ನಂತರ ಬಂದ ಬಾಸ್ ಡಿ ಲೀಡೆ 10 ರನ್ ಗಳಿಸಿದರೆ, ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ತೇಜ ನಿಡಮನೂರು 32 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 41 ರನ್ ಬಾರಿಸಿದರು. ಉಳಿದ ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಟಲಿಲ್ಲ.

ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಮೊಯಿನ್ ಅಲಿ 8.2 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರೆ, ಆದಿಲ್ ರಶೀದ್ 8 ಓವರ್‌ಗಳಲ್ಲಿ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಡೇವಿಡ್ ವಿಲ್ಲಿ 7 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ 7 ಓವರ್‌ಗಳಲ್ಲಿ 19 ರನ್ ನೀಡಿ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ನೀಡಿದರು. ಆದರೆ, ತಂಡದ ಮೊತ್ತ 48 ರನ್‌ಗಳಾಗಿದ್ದಾಗ ಜಾನಿ ಬೈರ್‌ಸ್ಟೋವ್ 15 ರನ್ ಗಳಿಸಿ ಔಟಾದರು.
ನಂತರ ಬಂದ ಜೋ ರೂಟ್ ನಿಧಾನಗತಿಯ ಆಟಕ್ಕೆ ಮೊರೆ ಹೋದರು ಮತ್ತು 35 ಎಸೆತಗಳಲ್ಲಿ 1 ಬೌಂಡರಿ ಮೂಲಕ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟರ್ ಡೇವಿಡ್ ಮಲಾನ್ 74 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 87 ರನ್ ಬಾರಿಸಿ ಔಟಾದರು.
ಇನ್ನು ಬೆನ್ ಸ್ಟೋಕ್ಸ್ ನೆದರ್ಲ್ಯಾಂಡ್ಸ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು ಮತ್ತು ತಮ್ಮ ಶತಕ ಕೂಡ ಪೂರೈಸಿದರು. 86 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 108 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ಔಟಾದರು. ಹ್ಯಾರಿ ಬ್ರೂಕ್ 11 ರನ್ ಗಳಿಸಿದರೆ, ನಾಯಕ ಜೋಸ್ ಬಟ್ಲರ್ 5 ರನ್, ಮೊಯಿನ್ ಅಲಿ 4 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರಿಗೆ ಬೆಂಬಲ ನೀಡಿದ ಕ್ರಿಸ್ ವೋಕ್ಸ್ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 51 ರನ್ ಗಳಿಸಿ ತಂಡದ ಮೊತ್ತ 320ರ ಗಡಿ ದಾಟಿಸಿದರು. ಅಂತಿಮವಾಗಿ ಡೇವಿಡ್ ವಿಲ್ಲಿ 6 ರನ್, ಗಸ್ ಅಟ್ಕಿನ್ಸನ್ 2 ರನ್ ಮತ್ತು ಆದಿಲ್ ರಶೀದ್ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 74 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಆರ್ಯನ್ ದತ್ 10 ಓವರ್‌ಗಳಲ್ಲಿ 67 ರನ್ ನೀಡಿ 2 ವಿಕೆಟ್ ಪಡೆದರು. ಲೋಗನ್ ವ್ಯಾನ್ ಬೀಕ್ 10 ಓವರ್‌ಗಳಲ್ಲಿ 88 ರನ್ ನೀಡಿ 2 ವಿಕೆಟ್ ಕಿತ್ತರೆ, ಪಾಲ್ ವ್ಯಾನ್ ಮೀಕೆರೆನ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications