ಗುರುವಾರ, ನವೆಂಬರ್ 9ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 41ನೇ ಪ್ರಮುಖ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಕಕ್ಕಾಬಿಕ್ಕಿಯಾಗಿದ್ದು, ಸಾಧಾರಣ ಮೊತ್ತ ಕಲೆಹಾಕಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಸಲ್ ಪೆರೇರಾ ಅವರ ಏಕೈಕ ಅರ್ಧಶತಕದ ನೆರವಿನಿಂದ 46.4 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿದ್ದು, ನ್ಯೂಜಿಲೆಂಡ್ ತಂಡಕ್ಕೆ 172 ರನ್‌ಗಳ ಗೆಲುವಿನ ಗುರಿ ನೀಡಿದೆ.

ಶ್ರೀಲಂಕಾ ತಂಡದ ಇನ್ನಿಂಗ್ಸ್ ಆರಂಭಿಸಿದ ಕುಸಲ್ ಪೆರೇರಾ ಮತ್ತು ಪಾಥುಮ್ ನಿಸ್ಸಾಂಕ ಜೋಡಿ ಮತ್ತೊಮ್ಮೆ ಕಳಪೆ ಆರಂಭ ನೀಡಿತು. ತಂಡದ ಮೊತ್ತ 3 ರನ್‌ಗಳಾಗುವಷ್ಟರಲ್ಲಿ 2 ರನ್ ಗಳಿಸಿದ್ದ ಪ್ರಮುಖ ಬ್ಯಾಟರ್ ಪಾಥುಮ್ ನಿಸ್ಸಾಂಕ ವಿಕೆಟ್ ಕಳೆದುಕೊಂಡಿತು.
ಈ ವೇಳೆ ಕ್ರೀಸ್‌ಗೆ ಬಂದ ನಾಯಕ ಕುಸಲ್ ಮೆಂಡೀಸ್ ಹೆಚ್ಚು ನಿಲ್ಲದೆ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸದೀರ ಸಮರವಿಕ್ರಮ 1 ರನ್, ಚರಿತ್ ಅಸಲಂಕಾ 8 ರನ್ ಮಾತ್ರ ಗಳಿಸಿದರು.
ಎಡಗೈ ಬ್ಯಾಟರ್ ಕುಸಾಲ್ ಪೆರೇರಾ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ, ಕುಸಾಲ್ ಪೆರೆರಾ 28 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 51 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಏಂಜೆಲೊ ಮ್ಯಾಥ್ಯೂಸ್ 27 ಎಸೆತಗಳಲ್ಲಿ 2 ಬೌಂಡರಿ ಸಮೇತ 16 ರನ್ ಗಳಿಸಿದರೆ, ಧನಂಜಯ್ ಡಿ ಸಿಲ್ವ 24 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 19 ರನ್ ಗಳಿಸಿ ಕಿವೀಸ್ ಬೌಲರ್‌ಗಳಿಗೆ ಪ್ರತಿರೋಧ ನೀಡಿದರು. ಚಮಿಕ ಕರುಣಾರತ್ನೆ 6 ರನ್, ದುಶ್ಮಂತ್ ಚಮೀರ 1 ರನ್ ಗಳಿಸಿ ಔಟಾದರು.
ಇನ್ನು ಮಹೀಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ ಕೊನೆಯ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಮಹೀಶ್ ತೀಕ್ಷಣ 91 ಎಸೆತಗಳಲ್ಲಿ 3 ಬೌಂಡರಿ ಮೂಲಕ ಅಜೇಯ 39 ರನ್ ಗಳಿಸಿದರೆ, ದಿಲ್ಶನ್ ಮಧುಶಂಕ 48 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 19 ರನ್ ಗಳಿಸಿ ಔಟಾದರು.

ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರ ಟ್ರೆಂಟ್ ಬೌಲ್ಟ್ 10 ಓವರ್‌ಗಳಲ್ಲಿ 37 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಯಾಂಟ್ನರ್ 10 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಲಾಕಿ ಫರ್ಗ್ಯುಸನ್ 10 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ರಚಿನ್ ರವೀಂದ್ರ 7.4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಟಿಮ್ ಸೌಥಿ 8 ಎಸೆತಗಳಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು.