World Cup 2023: ಶ್ರೀಲಂಕಾ ತಂಡದ ಆಲ್‌ರೌಂಡ್ ಪ್ರದರ್ಶನ; ಕ್ರಿಕೆಟ್ ಜನಕ ಇಂಗ್ಲೆಂಡ್‌ಗೆ ಆಘಾತಕಾರಿ ಸೋಲು
ಗುರುವಾರ, ಅಕ್ಟೋಬರ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಶ್ರೀಲಂಕಾ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಲು ನಿರ್ಣಾಯಕವಾಗಿದ್ದ ಮತ್ತು ಗೆಲ್ಲಲೇಬೇಕಾದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತೊಂದು ಆಘಾತಕಾರಿ ಸೋಲು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ವೈಫಲ್ಯ ಕಂಡ ಕಾರಣ ಓವರ್‌ಗಳಲ್ಲಿ ಕೇವಲ 156 ರನ್‌ಗಳಿಗೆ ಆಲೌಟ್ ಆಯಿತು.
157 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ದ್ವೀಪ ರಾಷ್ಟ್ರ ಶ್ರೀಲಂಕಾ ತಂಡ ಪಾಥುಮ್ ನಿಸ್ಸಾಂಕ ಮತ್ತು ಸದೀರ ಸಮರವಿಕ್ರಮ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 25.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಗೆಲುವು ಪಡೆಯಿತು.
ಈ ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಿಂದ 2 ಗೆಲುವು ಮತ್ತು 3 ಸೋಲುಗಳೊಂದಿಗೆ 4 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದರೆ, ಇಂಗ್ಲೆಂಡ್ ತಂಡ ಆಡಿದ 5 ಪಂದ್ಯಗಳಿಂದ 1 ಗೆಲುವು ಮತ್ತು 4 ಸೋಲುಗಳೊಂದಿಗೆ 2 ಅಂಕಗಳಿಂದ 9ನೇ ಸ್ಥಾನಕ್ಕೆ ಕುಸಿದಿದೆ.

ಶ್ರೀಲಂಕಾ ತಂಡದ ಇನ್ನಿಂಗ್ಸ್ ಆರಂಭಿಸಿದ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಪೆರೆರಾ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಕೇವಲ 4 ರನ್ ಗಳಿಸಿ ಕುಸಲ್ ಪೆರೆರಾ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಕುಸಾಲ್ ಮೆಂಡೀಸ್ ಕೇವಲ 11 ರನ್ ಗಳಿಸಿ ಔಟಾದರು.
ಈ ವೇಳೆ ಜೊತೆಗೂಡಿದ ಪಾಥುಮ್ ನಿಸ್ಸಾಂಕ ಮತ್ತು ಸದೀರ ಸಮರವಿಕ್ರಮ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 137 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸಿದರು.
ಆರಂಭಿಕ ಪಾಥುಮ್ ನಿಸ್ಸಾಂಕ 83 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅಜೇಯ 77 ರನ್ ಬಾರಿಸಿದರೆ, ಸದೀರ ಸಮರವಿಕ್ರಮ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೇಯ 65 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಡೇವಿಡ್ ವಿಲ್ಲಿ 5 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಉಳಿದ ಬೌಲರ್‌ಗಳು ವಿಕೆಟ್ ರಹಿತರಾದರು.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತ 45 ರನ್‌ಗಳಾಗಿದ್ದಾಗ 25 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿದ್ದ ಡೇವಿಡ್ ಮಲಾನ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ಜೋ ರೂಟ್ ಕೇವಲ 3 ರನ್ ಗಳಿಸಿ ರನೌಟ್ ಆದರು. ಇನ್ನು ಮತ್ತೊಬ್ಬ ಆರಂಭಿಕ ಜಾನಿ ಬೈರ್‌ಸ್ಟೋವ್ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ನೆರವಿನಿಂದ 30 ರನ್‌ಗಳಿಗೆ ಔಟಾದರು.
ಈ ವೇಳೆ ಕ್ರೀಸ್‌ಗೆ ಬಂದ ಬೆನ್ ಸ್ಟೋಕ್ಸ್ 73 ಎಸೆತಗಳಲ್ಲಿ 6 ಬೌಂಡರಿ ಮೂಲಕ 43 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ಶ್ರೀಲಂಕಾದ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು.
ನಾಯಕ ಜೋಸ್ ಬಟ್ಲರ್ 8 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 1 ರನ್, ಮೊಯಿನ್ ಅಲಿ 15 ರನ್, ಕ್ರಿಸ್ ವೋಕ್ಸ್ 0, ಡೇವಿಡ್ ವಿಲ್ಲಿ 14 ರನ್, ಆದಿಲ್ ರಶೀದ್ 2 ರನ್ ಮತ್ತು ಮಾರ್ಕ್ ವುಡ್ 5 ರನ್ ಮಾತ್ರ ಕಲೆಹಾಕಿದರು.
ಒಂದು ಹಂತದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಮುಂದಿನ 111 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಶ್ರೀಲಂಕಾ ತಂಡದ ಆಟಗಾರರು ಶಿಸ್ತುಬದ್ಧ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಹಾಲಿ ಚಾಂಪಿಯನ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ಲಹಿರು ಕುಮಾರ 7 ಓವರ್‌ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಏಂಜೆಲೊ ಮ್ಯಾಥ್ಯೂಸ್ 5 ಓವರ್‌ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಕಸುನ್ ರಜಿತ ಕೂಡ 7 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ 8.2 ಓವರ್‌ಗಳಲ್ಲಿ 21 ರನ್ ನೀಡಿ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications