ಮಂಗಳವಾರ, ಅಕ್ಟೋಬರ್ 17ರಂದು ಧರ್ಮಶಾಲಾದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಗುಂಪು ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲ್ಯಾಂಡ್ಸ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು.
2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳ ಗೆಲುವಿನಲ್ಲಿ ತೇಲುತ್ತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲ್ಯಾಂಡ್ಸ್ ವಿರುದ್ಧ ಎದುರಾದ ಸೋಲಿನಿಂದ ಅವರ ಗೆಲುವಿನ ಮೆರವಣಿಗೆ ಸ್ಥಗಿತಗೊಂಡಿದೆ.

ಈ ವಿಶ್ವಕಪ್ ಪಂದ್ಯಕ್ಕೂ ಮುನ್ನ ಯಾರೂ ಇಂತಹ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಆದರೆ ನೆದರ್ಲ್ಯಾಂಡ್ಸ್ ತಂಡವು ವಿಶ್ವದ ನಂ.3 ಏಕದಿನ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಆಘಾತಕಾರಿ ಫಲಿತಾಂಶ ನೀಡುವ ಮೂಲಕ ನಂಬಿಕೆಯನ್ನು ಉಳಿಸಿಕೊಂಡಿದೆ.
ಮಳೆ-ಬಾಧಿತ ಪಂದ್ಯದಲ್ಲಿ ಪ್ರತಿ ತಂಡಕ್ಕೆ 43 ಓವರ್‌ಗಳಿಗೆ ಕಡಿಮೆ ಮಾಡುವುದರೊಂದಿಗೆ, ನೆದರ್ಲ್ಯಾಂಡ್ಸ್ 8 ವಿಕೆಟ್‌ಗೆ 245 ರನ್‌ಗಳ ಉತ್ತಮ ಮೊತ್ತವನ್ನು ಗಳಿಸಿತು. ಪ್ರತ್ಯುತ್ತರವಾಗಿ, ದಕ್ಷಿಣ ಆಫ್ರಿಕಾ ಪಂದ್ಯದುದ್ದಕ್ಕೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು 42.5 ಓವರ್‌ಗಳಲ್ಲಿ ಕೇವಲ 207 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು.

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು, ದಕ್ಷಿಣ ಆಫ್ರಿಕಾ +2.360 ನೆಟ್ ರನ್-ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿತ್ತು. ಸೋಲಿನ ನಂತರ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಥಾನವು ಬದಲಾಗದಿದ್ದರೂ, ಅವರ ನೆಟ್ ರನ್-ರೇಟ್ +1.385ಗೆ ಕಡಿಮೆಯಾಗಿದೆ.
ಇದರಿಂದ ಭಾರತ ತಂಡದ ಅಗ್ರಸ್ಥಾನಕ್ಕೆ ಯಾವುದೇ ಚ್ಯುತಿ ಕಂಡುಬಂದಿಲ್ಲ. ಮೂರು ಪಂದ್ಯಗಳೊಂದಿಗೆ 6 ಅಂಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಭಾರತಕ್ಕಿಂತ ನ್ಯೂಜಿಲೆಂಡ್ ನೆಟ್ ರನ್‌ರೇಟ್ ಕಡಿಮೆ ಇರುವುದರಿಂದ, ಅಷ್ಟೇ ಪಂದ್ಯದ ಮೂಲಕ 6 ಅಂಕಗಳಿಂದ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.
ಇನ್ನು ದಕ್ಷಿಣ ಆಫ್ರಿಕಾ ತಂಡ ಆಡಿದ ಮೂರು ಪಂದ್ಯಗಳಿಂದ 2 ಗೆಲುವು ಮತ್ತು 1 ಸೋಲಿನೊಂದಿಗೆ 4 ಅಂಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನೆದರ್ಲ್ಯಾಂಡ್ಸ್ ತಂಡ 2 ಸೋಲು ಮತ್ತು 1 ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.
ಇನ್ನು ಪಾಕಿಸ್ತಾನ ತಂಡವು 2 ಗೆಲುವು ಮತ್ತು 1 ಸೋಲಿನೊಂದಿಗೆ 4 ಅಂಕಗಳನ್ನು ಕಲೆಹಾಕಿ 4ನೇ ಸ್ಥಾನದಲ್ಲಿ ಮುಂದುವರೆದಿದ್ದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 2 ಸೋಲು ಮತ್ತು 1 ಗೆಲುವಿನ ಮೂಲಕ 5ನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧ ಗೆದ್ದ ಅಫ್ಘಾನಿಸ್ತಾನ 2 ಸೋಲು ಮತ್ತು 1 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದ್ದರೆ, ನಂತರದ 7 ಮತ್ತು 8ನೇ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳಿವೆ. ಆಡಿದ ಮೂರು ಪಂದ್ಯಗಳಲ್ಲಿ ಯಾವುದೇ ಗೆಲುವು ಕಾಣದಿರುವ ಶ್ರೀಲಂಕಾ ತಂಡ ಕೊನೆಯ ಸ್ಥಾನದಲ್ಲಿದೆ.
ತಮ್ಮ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ, ಆತ್ಮವಿಶ್ವಾಸ ಕಳೆದುಕೊಳ್ಳದ ನೆದರ್ಲ್ಯಾಂಡ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 43-ಓವರ್‌ಗಳ ಪಂದ್ಯದಲ್ಲಿ 8 ವಿಕೆಟ್‌ಗೆ 245 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ಯಶಸ್ವಿಯಾಯಿತು.
ಸ್ಕಾಟ್ ಎಡ್ವರ್ಡ್ಸ್ ನಿರ್ಣಾಯಕ ನಾಯಕನ ಇನ್ನಿಂಗ್ಸ್ ಆಡಿದರು, 21ನೇ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 82 ರನ್‌ಗಳಿಗೆ ಹೆಣಗಾಡುತ್ತಿದ್ದ ನೆದರ್ಲ್ಯಾಂಡ್ಸ್ ತಂಡವನ್ನು ರಕ್ಷಿಸಲು ಸ್ಕಾಟ್ ಎಡ್ವರ್ಡ್ಸ್ ಅಜೇಯ 78 ರನ್ ಬಾರಿಸಿದರು.
ಸವಾಲಿನ ಮೊತ್ತದ ಚೇಸಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಕೂಡ ಕುಸಿತ ಅನುಭವಿಸಿ 207 ರನ್‌ಗಳಿಗೆ ಆಲೌಟ್ ಆಗಬೇಕಾಯಿತು. ಇದು 2023ರ ಐಸಿಸಿ ಪಂದ್ಯಾವಳಿಯಲ್ಲಿ ಅವರ ಮೊದಲ ಸೋಲಿಗೆ ಕಾರಣವಾಯಿತು.
ಡೇವಿಡ್ ಮಿಲ್ಲರ್ ಮಾತ್ರ 43 ರನ್‌ಗಳ ದೊಡ್ಡ ಕೊಡುಗೆ ನೀಡಿದರು. ಆದರೆ 31ನೇ ಓವರ್‌ನಲ್ಲಿ ಅವರು ಔಟಾಗುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದ ಸೋಲು ಬಹುತೇಕ ಖಚಿತವಾಯಿತು.
ನೆದರ್ಲ್ಯಾಂಡ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಅವರ ಬ್ಯಾಟಿಂಗ್ ಈ ಪಂದ್ಯದ ಮಹತ್ವದ ತಿರುವು. ನೆದರ್ಲ್ಯಾಂಡ್ಸ್ 200 ರನ್‌ಗಳ ಒಳಗೆ ಆಲೌಟ್ ಆಗುವ ಸೂಚನೆ ಕಾಣುತ್ತಿತ್ತು. ಆದರೆ, ಡಚ್ಚರ ತಂಡದ ನಾಯಕನ ಆಲೋಚನೆಗಳು ಉಳಿದೆಲ್ಲರ ಆಲೋಚನೆಗಳನ್ನು ತಲೆಕೆಳಗೆ ಮಾಡಿದವು.
ಸ್ಕಾಟ್ ಎಡ್ವರ್ಡ್ಸ್ ಮತ್ತು ನೆದರ್ಲ್ಯಾಂಡ್ಸ್‌ನ ಕೆಳ ಕ್ರಮಾಂಕದ ಬ್ಯಾಟರ್‌ಗಳು ಕೊನೆಯ 10 ಓವರ್‌ಗಳಲ್ಲಿ ಸವಾಲಿನ ಮೊತ್ತ ಕಲೆಹಾಕಲು ಬರೋಬ್ಬರಿ 109 ರನ್‌ಗಳನ್ನು ಸೇರಿಸಿದರು.
ನಂತರ ನೆದರ್ಲ್ಯಾಂಡ್ಸ್ ತಂಡದ ಬೌಲರ್‌ಗಳು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ವಿರುದ್ಧ ತಿರುಗಿ ಬಿದ್ದರು. ಪಂದ್ಯ ಗೆಲ್ಲಲು ನೆದರ್ಲ್ಯಾಂಡ್ಸ್ ಸ್ಪಿನ್ ಮತ್ತು ವೇಗದ ಬೌಲಿಂಗ್ ವಿಭಾಗವನ್ನು ಪ್ರಮುಖವಾಗಿ ಬಳಸಿತು.
ಕ್ವಿಂಟನ್ ಡಿ ಕಾಕ್ ಔಟ್ ಆದ ನಂತರ, ದಕ್ಷಿಣ ಆಫ್ರಿಕಾ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡಿತು. ನೆದರ್ಲ್ಯಾಂಡ್ಸ್ ತಂಡದ ಎಲ್ಲ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿ ಅಗತ್ಯಕ್ಕೆ ತಕ್ಕಂತೆ ವಿಕೆಟ್ ಪಡೆದುಕೊಂಡರು.