ಭಾನುವಾರ, ಜೂನ್ 25ರಂದು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಐರ್ಲೆಂಡ್ ವಿರುದ್ಧ 133 ರನ್‌ಗಳ ಅಮೋಘ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ, ದಿಮುತ್ ಕರುಣಾರತ್ನೆ ಅವರ ಭರ್ಜರಿ ಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 325 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಯಿತು.

ಶ್ರೀಲಂಕಾ ತಂಡದ ಬ್ಯಾಟಿಂಗ್ ಆರಂಭಿಸಿದ ಪಾಥುಮ್ ನಿಸ್ಸಾಂಕ ಮತ್ತು ದಿಮುತ್ ಕರುಣಾರತ್ನೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 48 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ 26 ಎಸೆತಗಳಲ್ಲಿ 4 ಬೌಂಡರಿ ಸಮೇತ 20 ರನ್ ಗಳಿಸಿದ್ದ ಪಾಥುಮ್ ನಿಸ್ಸಾಂಕ ವಿಕೆಟ್ ಒಪ್ಪಿಸಿದರು.
ನಂತರ ಬಂದ ಕುಸಲ್ ಮೆಂಡೀಸ್ ಯಾವುದೇ ರನ್ ಗಳಿಸಲು ವಿಫಲರಾದರೆ, ಆ ಬಳಿಕ ಸದೀರ ಸಮರವಿಕ್ರಮ ಹಾಗೂ ದಿಮುತ್ ಕರುಣಾರತ್ನೆ ಜೊತೆಗೂಡಿ 168 ರನ್‌ಗಳ ದೊಡ್ಡ ಜೊತೆಯಾಟ ನೀಡಿದರು. ತಂಡದ ಮೊತ್ತ 216 ರನ್‌ಗಳಾಗಿದ್ದಾಗ, 86 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 82 ರನ್ ಗಳಿಸಿದ್ದ ಸದೀರ ಸಮರವಿಕ್ರಮ ಔಟಾದರು.
ಆಗ ಕ್ರೀಸ್‌ಗೆ ಬಂದ ಚರಿತ್ ಅಸಲಂಕ 30 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 38 ರನ್ ಬಾರಿಸಿದರು. ಧನಂಜಯ್ ಡಿ ಸಿಲ್ವ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 42 ರನ್ ಗಳಿಸಿದರು.

ಇನ್ನು ಆರಂಭಿಕ ದಿಮುತ್ ಕರುಣಾರತ್ನೆ 103 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 103 ರನ್ ಗಳಿಸಿ ಭರ್ಜರಿ ಶತಕ ಬಾರಿಸಿ ಔಟಾದರು. ಕೊನೆಯಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ದರಿಂದ 325 ರನ್‌ಗಳಿಗೆ ಸರ್ವಪತನ ಕಂಡಿತು.
ಬೌಲಿಂಗ್‌ನಲ್ಲಿ ಐರ್ಲೆಂಡ್ ತಂಡದ ಪರ ಮಾರ್ಕ್ ಅಡೈರ್ 9.5 ಓವರ್‌ಗಳಲ್ಲಿ 46 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಬ್ಯಾರಿ ಮಾಕ್‌ಕಾರ್ತಿ 9 ಓವರ್‌ಗಳಲ್ಲಿ 56 ರನ್ ನೀಡಿ 3 ವಿಕೆಟ್ ಕಬಳಿಸಿದರು. ಗ್ಯಾರೆತ್ ಡಲಾನಿ 10 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಪಡೆದರು.
ಪ್ರತ್ಯುತ್ತರವಾಗಿ 326 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ 31 ಓವರ್‌ಗಳಲ್ಲಿ 192 ರನ್ ಗಳಿಸಿ ಆಲೌಟ್ ಆಯಿತು ಮತ್ತು 133 ರನ್‌ಗಳ ಅಂತರದಿಂದ ಸೋಲಬೇಕಾಯಿತು.

ಐರ್ಲೆಂಡ್ ತಂಡದ ಪರ ಆಂಡಿ ಮೆಕ್‌ಬ್ರೈನ್ 17 ರನ್, ಪಾಲ್ ಸ್ಟಿರ್ಲಿಂಗ್ 6 ರನ್, ಆಂಡ್ರ್ಯೂ ಬಲ್ಬಿರ್ನಿ 12 ರನ್, ಹ್ಯಾರಿ ಟೆಕ್ಟರ್ 33 ರನ್, ಕರ್ಟಿಸ್ ಕ್ಯಾಂಪರ್ 39 ರನ್, ಜಾರ್ಜ್ ಡಾಕ್‌ರೆಲ್ 26 ರನ್, ಗ್ಯಾರೆತ್ ಡಲಾನಿ 19 ರನ್ ಗಳಿಸಿದರೆ, ಉಳಿದವರು ಎರಡಂಕಿ ಮೊತ್ತ ದಾಟಲು ವಿಫಲರಾದರು.
ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ವನಿಂದು ಹಸರಂಗ ಮತ್ತೆ ಮಿಂಚಿದ್ದು, 10 ಓವರ್‌ಗಳಲ್ಲಿ 79 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮಹೀಶ್ ತೀಕ್ಷಣ 6 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಕಸುನ್ ರಜಿತ, ಲಹಿರು ಕುಮಾರ, ದಸುನ್ ಶನಕ ತಲಾ ಒಂದೊಂದು ವಿಕೆಟ್ ಪಡೆದರು.
2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ, ಜೂನ್ 27ರಂದು ಸ್ಕಾಟ್ಲೆಂಡ್ ವಿರುದ್ಧ ಆಡಲಿದ್ದರೆ, ಐರ್ಲೆಂಡ್ ತಂಡ ತನ್ನ ಮುಂದಿನ ಪಂದ್ಯವನ್ನು ಅದೇ ದಿನ ಯುಎಇ ವಿರುದ್ಧ ಆಡಲಿದೆ.