AUS vs SA Semifinal: ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟ; ಆಸೀಸ್‌ಗೆ ಸಾಧಾರಣ ಗುರಿ ನೀಡಿದ ಹರಿಣ ಪಡೆ
ಗುರುವಾರ, ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಚೋಕರ್ಸ್ ಕುಖ್ಯಾತಿಯ ದಕ್ಷಿಣ ಆಫ್ರಿಕಾ ತಂಡ ಸಾಧಾರಣ ಮೊತ್ತವನ್ನು ಕಲೆಹಾಕಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡವು ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಡೇವಿಡ್ ಮಿಲ್ಲರ್ ಅವರ ಅಮೋಘ ಶತಕದ ನೆರವಿನಿಂದ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 213 ರನ್‌ಗಳ ಗುರಿ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲ ಓವರ್‌ನಲ್ಲೇ ನಾಯಕ ಟೆಂಬಾ ಬವುಮಾ ವಿಕೆಟ್ ಕಳೆದುಕೊಳ್ಳುವ ಮೂಲಕ ಪೆವಿಲಿಯನ್‌ಗೆ ಪರೇಡ್‌ಗೆ ಮುನ್ನುಡಿ ಬರೆಯಿತು.
ಅ ಬಳಿಕ ಕ್ವಿಂಟನ್ ಡಿ ಕಾಕ್ ಕೂಡ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಹೋರಾಡಿದರು. ಆದರೆ, ತಂಡದ ಮೊತ್ತ 5 ರನ್‌ಗಳಾಗಿದ್ದಾಗ 3 ರನ್ ಗಳಿಸಿ ಔಟಾದರು. ಇನ್ನು ರಾಸ್ಸೀ ವಾನ್ ಡೇರ್ ಡುಸ್ಸೆನ್ ಕೇವಲ 6 ರನ್‌ಗಳಿಗೆ ತಮ್ಮ ಆಟ ಮುಗಿಸಿದರು. ಏಡೆನ್ ಮಾರ್ಕ್ರಾಮ್ 10 ರನ್ ಗಳಿಸಿ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.
11.5 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ 24 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ 5ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.

ಈ ವೇಳೆ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 47 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸದರು. ನಂತರದ ಎಸೆತದಲ್ಲಿ ಮಾರ್ಕೊ ಜಾನ್ಸನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ಗೆರಾಲ್ಡ್ ಕೋಟ್ಜಿ 39 ಎಸೆತಗಳಲ್ಲಿ 2 ಬೌಂಡರಿ ಸಮೇತ 19 ರನ್ ಗಳಿಸಿ ವಿಕೆಟ್ ನೀಡಿದರು.
ಇನ್ನು ಇನ್ನಿಂಗ್ಸ್‌ನುದ್ದಕ್ಕೂ ಏಕಾಂಗಿ ಹೋರಾಟ ನಡೆಸಿದ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿ ಕುಸಿದಿದ್ದ ತಂಡವನ್ನು ಮೇಲೆತ್ತಿದರು ಮತ್ತು ತಂಡದ ಮೊತ್ತ 200ರ ಗಡಿ ದಾಟಲು ಸಹಾಯಕವಾದರು. ಕೊನೆಯಲ್ಲಿ ಕೇಶವ್ ಮಹಾರಾಜ್ 4 ರನ್, ಕಗಿಸೊ ರಬಾಡ 10 ರನ್ ಮತ್ತು ತಬ್ರೇಜ್ ಶಮ್ಸಿ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಮಿಚೆಲ್ ಸ್ಟಾರ್ಕ್ 10 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಪ್ಯಾಟ್ ಕಮ್ಮಿನ್ಸ್ 9.4 ಓವರ್‌ಗಳಲ್ಲಿ 51 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜೋಶ್ ಹ್ಯಾಜಲ್‌ವುಡ್ ಮತ್ತು ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ಕಂಟಕವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications