World Cup 2023: ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಲಂಕಾ; ಗುರಿ ಬೆನ್ನಟ್ಟುವುದೇ?
ಗುರುವಾರ, ಅಕ್ಟೋಬರ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಶ್ರೀಲಂಕಾ ತಂಡದ ಬೌಲರ್‌ಗಳು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದಾರೆ.
ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಲು ಉಭಯ ತಂಡಗಳಿಗೆ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗಿದ್ದು, ಗೆಲ್ಲಲೇಬೇಕಾದ ಪಂದ್ಯದಲ್ಲಿ ಇಂಗ್ಲೆಂಡ್ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ವೈಫಲ್ಯ ಕಂಡ ಕಾರಣ 33.2 ಓವರ್‌ಗಳಲ್ಲಿ ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿದ್ದು, ದ್ವೀಪ ರಾಷ್ಟ್ರ ಶ್ರೀಲಂಕಾ ತಂಡಕ್ಕೆ 157 ರನ್‌ಗಳ ಸುಲಭ ಗುರಿ ನೀಡಿದೆ.
ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತ 45 ರನ್‌ಗಳಾಗಿದ್ದಾಗ 25 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿದ್ದ ಡೇವಿಡ್ ಮಲಾನ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ಜೋ ರೂಟ್ ಕೇವಲ 3 ರನ್ ಗಳಿಸಿ ರನೌಟ್ ಆದರು. ಇನ್ನು ಮತ್ತೊಬ್ಬ ಆರಂಭಿಕ ಜಾನಿ ಬೈರ್‌ಸ್ಟೋವ್ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ನೆರವಿನಿಂದ 30 ರನ್‌ಗಳಿಗೆ ಔಟಾದರು.

ಈ ವೇಳೆ ಕ್ರೀಸ್‌ಗೆ ಬಂದ ಬೆನ್ ಸ್ಟೋಕ್ಸ್ 73 ಎಸೆತಗಳಲ್ಲಿ 6 ಬೌಂಡರಿ ಮೂಲಕ 43 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ಶ್ರೀಲಂಕಾದ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು.
ನಾಯಕ ಜೋಸ್ ಬಟ್ಲರ್ 8 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 1 ರನ್, ಮೊಯಿನ್ ಅಲಿ 15 ರನ್, ಕ್ರಿಸ್ ವೋಕ್ಸ್ 0, ಡೇವಿಡ್ ವಿಲ್ಲಿ 14 ರನ್, ಆದಿಲ್ ರಶೀದ್ 2 ರನ್ ಮತ್ತು ಮಾರ್ಕ್ ವುಡ್ 5 ರನ್ ಮಾತ್ರ ಕಲೆಹಾಕಿದರು.
ಒಂದು ಹಂತದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಮುಂದಿನ 111 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಶ್ರೀಲಂಕಾ ತಂಡದ ಆಟಗಾರರು ಶಿಸ್ತುಬದ್ಧ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಹಾಲಿ ಚಾಂಪಿಯನ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ಲಹಿರು ಕುಮಾರ 7 ಓವರ್‌ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಏಂಜೆಲೊ ಮ್ಯಾಥ್ಯೂಸ್ 5 ಓವರ್‌ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಕಸುನ್ ರಜಿತ ಕೂಡ 7 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ 8.2 ಓವರ್‌ಗಳಲ್ಲಿ 21 ರನ್ ನೀಡಿ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications