2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದರಿಂದಾಗಿಯೇ ಟೀಮ್ ಇಂಡಿಯಾ ಅಜೇಯವಾಗಿ ಸೆಮಿಫೈನಲ್ ತಲುಪಿದೆ.
ಬುಧವಾರ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಗ್ರ್ಯಾಂಡ್ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಲೀಗ್ ಹಂತದಲ್ಲಿ ಇದುವರೆಗೆ ಆಡಿದ ಸತತ ಒಂಬತ್ತು ಗೆಲುವುಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಈ ಪ್ರದರ್ಶನದ ಹಿಂದೆ ತಂಡದ ಸಂಘಟಿತ ಆಟ ಎದ್ದು ಕಾಣುತ್ತಿದೆ. ಆದರೆ ಗಾಯದ ಸಮಸ್ಯೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ತಂಡದ ಟಾಪ್ ಆರ್ಡರ್ ಬ್ಯಾಟರ್‍ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಎಲ್ಲಾ ಬೌಲರ್‌ಗಳು ಕರಾರುವಾಕ್ ದಾಳಿ ನಡೆಸುತ್ತಿದ್ದಾರೆ.
ಆದರೆ ಟೀಮ್ ಇಂಡಿಯಾಕ್ಕೆ ಆ ಒಬ್ಬ ಆಟಗಾರನ ಗಾಯ ತಂಡಕ್ಕೆ ನಿಜಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದಾಗಿ ಭಾರತ ತಂಡದಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ.

ವಿರಾಟ್ ಕೊಹ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2023ರ ಏಕದಿನ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಅರ್ಧಶತಕ ಬಾರಿಸಿದರು ಮತ್ತು ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಒಂಬತ್ತು ವರ್ಷಗಳ ನಂತರ, ಪೂರ್ಣ ಓವರ್ ಬೌಲಿಂಗ್ ಮಾಡಲು ಪ್ರಯತ್ನಿಸಿದರು.
ಇದೀಗ ಬೌಲಿಂಗ್ ಕೋಚ್ ಪಾರಸ್ ಮಹಾಂಬ್ರೆ ಅವರು ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೊರತೆಯನ್ನು ವಿರಾಟ್ ಕೊಹ್ಲಿ ಸರಿದೂಗಿಸಬಹುದು ಎಂಬ ಸುಳಿವು ನೀಡಿದ್ದಾರೆ.
ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿಯನ್ನು ಸಾಂದರ್ಭಿಕ ಬೌಲರ್ ಆಗಿ ಬಳಸಿಕೊಳ್ಳಲು ಬೌಲಿಂಗ್ ಕೋಚ್ ಫುಲ್ ಮೂಡ್‌ನಲ್ಲಿದ್ದಂತಿದೆ.
ಎಲ್ಲಾ ಮೂರು ಹಂತಗಳಲ್ಲಿ ಬೌಲಿಂಗ್ ಮಾಡಲು ವಿರಾಟ್ ಕೊಹ್ಲಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಹೇಳಿದ್ದಾರೆ. ಅಂದರೆ ಕೊಹ್ಲಿ ಹೊಸ ಚೆಂಡಿನೊಂದಿಗೆ, ಮಧ್ಯಮ ಓವರ್‌ಗಳಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ಹಳೆಯ ಚೆಂಡಿನೊಂದಿಗೆ ಬೌಲ್ ಮಾಡುವಂತೆ ಮಾಡಬಹುದು.
2023ರ ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ, ಭಾರತೀಯ ಬೌಲಿಂಗ್ ಕೋಚ್ ಪಾರಸ್ ಮಹಾಂಬ್ರೆ ಮಾತನಾಡಿ, "ನಾವು ವಿರಾಟ್ ಕೊಹ್ಲಿಯನ್ನು ಎಲ್ಲಾ ಮೂರು ಹಂತಗಳಲ್ಲಿ ಬೌಲರ್ ಆಗಿ ಬಳಸಿಕೊಳ್ಳಲು ತಯಾರಿ ನಡೆಸುತ್ತಿದ್ದೇವೆ. ನಾನು ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾವು ಕೊಹ್ಲಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಚರ್ಚಿಸಿದ್ದೇವೆ".
"ಕೊಹ್ಲಿ ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡುತ್ತಾರೆ ಮತ್ತು ಪವರ್‌ಪ್ಲೇನಲ್ಲಿ ಕೆಲವು ವಿಕೆಟ್‌ಗಳನ್ನು ಪಡೆಯುತ್ತಾರೆ. ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ತೀಕ್ಷ್ಣವಾದ ಯಾರ್ಕರ್‌ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ," ಎಂದು ಪಾರಸ್ ಮಹಾಂಬ್ರೆ ತಿಳಿಸಿದ್ದಾರೆ.
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ವತಃ ಸೇರಿದಂತೆ ಒಟ್ಟು 9 ಬೌಲರ್‌ಗಳನ್ನು ಬಳಸಿದರು. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹೊರತುಪಡಿಸಿ ಉಳಿದೆಲ್ಲ ಆಟಗಾರರು ಬೌಲಿಂಗ್ ಮಾಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಭಾರತ ತಂಡಕ್ಕೆ ಪಾರ್ಟ್ ಟೈಮರ್ ಆಗಿ ಬೌಲಿಂಗ್ ಮಾಡಿದರು.