ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಪ್ರಮುಖ 10 ತಂಡಗಳು ಈ ಮೆಗಾ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು 2019ರ ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಲ್ಲದೆ, ಇದೇ ಅಹಮದಾಬಾದ್ ಮೈದಾನವು ಪಂದ್ಯಾವಳಿಯ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ.

ಈಗಾಗಲೇ ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ವಿರುದ್ಧ ಭಾರತ ತಂಡವು 9 ಸ್ಥಳಗಳಲ್ಲಿ ಆಡುತ್ತದೆ. ಟೀಂ ಇಂಡಿಯಾದ ಮೊದಲ ಪಂದ್ಯ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.
ಇನ್ನು ಭಾನುವಾರ, ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಟಿಕೆಟ್‌ಗಳ ಬೇಡಿಕೆ ಮತ್ತು ಬೆಲೆಗಳು ಆಕಾಶಕ್ಕೇರಲಿದೆ.
ಇದೇ ವೇಳೆ ಅಹಮದಾಬಾದ್‌ನ ಹೋಟೆಲ್‌ಗಳು ಮುಂಗಡ ಬುಕ್ಕಿಂಗ್ ಪ್ರಾರಂಭಿಸಿವೆ. ಮೂಲಗಳ ಪ್ರಕಾರ, ಅಹಮದಾಬಾದ್‌ನ ಪಂಚತಾರಾ ಹೋಟೆಲ್‌ನಲ್ಲಿ ಮೂಲ ಕ್ಲಾಸ್ ಕೊಠಡಿಯ ಬೆಲೆ ಪ್ರತಿ ರಾತ್ರಿಗೆ 50,000 ರೂಪಾಯಿಗೆ ಏರುತ್ತಿದೆ. ಇನ್ನು ಪ್ರೀಮಿಯಂ ವರ್ಗದ ಕೊಠಡಿಗಳ ಬೆಲೆ 1 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾದರೂ ಅಚ್ಚರಿಯಿಲ್ಲ.

2011ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ಗೆಲುವು ಸಾಧಿಸಿತ್ತು. ಅನಂತರ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ಗಳಲ್ಲಿ ಸೋತ ಭಾರತ ತಂಡ ಫೈನಲ್‌ಗೇರಲು ಸಾಧ್ಯವಾಗಿರಲಿಲ್ಲ.
2023ರ ಐಸಿಸಿ ವಿಶ್ವಕಪ್‌ಗಾಗಿ ಟಿಕೆಟ್ ಎಲ್ಲಿ ಖರೀದಿಸಬಹುದು?
ಮೂಲಗಳ ಪ್ರಕಾರ, ಕ್ರಿಕೆಟ್ ಅಭಿಮಾನಿಗಳು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ಪಡೆದುಕೊಳ್ಳದ್ದಾರೆ. ಐಸಿಸಿಯ ಅಧಿಕೃತ ವಿಶ್ವಕಪ್ ವೆಬ್‌ಸೈಟ್ ಅಥವಾ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸುವ ಆಯ್ಕೆಯನ್ನು ಪ್ರೇಕ್ಷಕರು ಹೊಂದಿರುತ್ತಾರೆ.
ಇದಲ್ಲದೆ, Bookmyshow, Paytm ಮತ್ತು Paytm ಇನ್‌ಸೈಡರ್‌ಗಳಂತಹ ಜನಪ್ರಿಯ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳು ಸಹ ಖರೀದಿಗೆ ಲಭ್ಯವಿರಲಿವೆ. ಆನ್‌ಲೈನ್ ಮಾರಾಟವು ಟಿಕೆಟ್‌ಗಳನ್ನು ಪಡೆಯುವ ಪ್ರಾಥಮಿಕ ವಿಧಾನವಾಗಿದೆ ಎಂದು ನಿರೀಕ್ಷಿಸಲಾಗಿದೆ, ಹೀಗಾಗಿ ಸೀಮಿತ ಆಫ್‌ಲೈನ್ ಮಾರಾಟಗಳು ಲಭ್ಯವಿರುತ್ತವೆ.
ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ಟಿಕೆಟ್‌ಗಳ ಬೆಲೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇನ್ನೂ ಪ್ರಕಟಿಸಿಲ್ಲ. ಆದರೆ ಹಿಂದಿನ ದಾಖಲೆಗಳ ಪ್ರಕಾರ, ಟಿಕೆಟ್‌ಗಳು ಪೇಟಿಎಂ, ಪೇಟಿಎಂ ಇನ್‌ಸೈಡರ್ ಮತ್ತು ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಲಭ್ಯವಿರಲಿವೆ.
ಆನ್‌ಲೈನ್ ಟಿಕೆಟ್ ಸುಗಮ
ಆನ್‌ಲೈನ್ ಟಿಕೆಟ್ ಮಾರಾಟದ ಕ್ರಮವು ಅಭಿಮಾನಿಗಳಿಗೆ ಸುಗಮ ಮತ್ತು ಹೆಚ್ಚು ಪರಿಣಾಮಕಾರಿ ಟಿಕೆಟಿಂಗ್ ಪ್ರಕ್ರಿಯೆಯನ್ನು ಖಾತ್ರಿಪಡಿಸಲಿದೆ. ಆದರೆ, ಆಫ್‌ಲೈನ್ ಟಿಕೆಟಿಂಗ್ ಜನಸ್ತೋಮ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸಲಿದೆ.
ಪ್ರತಿಷ್ಠಿತ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್ ಮಾರಾಟ ಮೂಲಕ, ವಿಶ್ವಕಪ್ ಪಂದ್ಯಾವಳಿ ಸಂಘಟಕರು ಆಫ್‌ಲೈನ್ ಟಿಕೆಟ್ ಮಾರಾಟದಿಂದ ಉಂಟಾಗಬಹುದಾದ ಕಾಲ್ತುಳಿತ ಅಥವಾ ಅಸ್ತವ್ಯಸ್ತತೆಯನ್ನು ಸಂಭಾವ್ಯವಾಗಿ ಕಡಿಮೆ ಮಾಡಬಹುದು.
ಶೀಗ್ರದಲ್ಲೇ ಐಸಿಸಿಯು ಏಕದಿನ ವಿಶ್ವಕಪ್‌ನ ಟಿಕೆಟ್ ಬೆಲೆ, ಸ್ಥಳ ಮತ್ತು ನಿರ್ದಿಷ್ಟ ಪಂದ್ಯಕ್ಕೆ ನಿರ್ದಿಷ್ಟ ದರವನ್ನು ನಿರ್ಧರಿಸಲಾಗುತ್ತದೆ. ದರಗಳ ಶ್ರೇಣಿಯು ಬದಲಾಗಲಿದ್ದು, ಪ್ರತಿ ಟಿಕೆಟ್‌ಗೆ 500ರಿಂದ 10,000 ರೂ.ವರೆಗೆ ಟಿಕೆಟ್‌ಗಳು ಲಭ್ಯವಿರುತ್ತವೆ. ಪ್ರತಿ ಟಿಕೆಟ್‌ನ ಬೆಲೆಯು ಸ್ಟೇಡಿಯಂನ ಆಸನ ಮತ್ತು ಪಂದ್ಯದ ಮಹತ್ವದ ಮೇಲೆ ಅವಲಂಬಿತವಾಗಿರುತ್ತದೆ.