ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜುಗಲ್‍ಬಂದಿ; ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಭೇರಿ
ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಅದ್ಭುತವಾಗಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಆಯಿತು.

200 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅತ್ಯದ್ಭುತ ಜೊತೆಯಾಟದ ನೆರವಿನಿಂದ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ಗುರಿ ತಲುಪಿತು.
ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಅವರನ್ನು ಸೊನ್ನೆಗೆ ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳು ಆರಂಭಿಕ ಮುನ್ನಡೆ ಸಾಧಿಸಿದ್ದರು.

ಭಾರತ ತಂಡ ಈ ಹಂತದಲ್ಲಿ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 4ನೇ ವಿಕೆಟ್‌ಗೆ 166 ರನ್‌ಗಳ ಜೊತೆಯಾಟದ ಮೂಲಕ ಪುನಃ ಇನ್ನಿಂಗ್ಸ್ ಕಟ್ಟಿದರು ಮತ್ತು ಭಾರತಕ್ಕೆ ಗೆಲುವು ಖಚಿತಪಡಿಸಿದರು.
ಏಷ್ಯಾ ಕಪ್‌ನ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿಯೂ ಮುಂದುವರೆಸಿದರು.
ಶತಕದ ಸನಿಹದಲ್ಲಿದ್ದ ವಿರಾಟ್ ಕೊಹ್ಲಿ ದೊಡ್ಡ ಶಾಟ್ ಬಾರಿಸಲು ಹೋಗಿ ಔಟಾಗಬೇಕಾಯಿತು. ಈ ವೇಳೆ 116 ಎಸೆತಗಳಲ್ಲಿ 6 ಬೌಂಡರಿ ಸಮೇತ ಅಮೂಲ್ಯ 85 ರನ್ ಬಾರಿಸಿದರು.

ಮತ್ತೊಂದೆಡೆ, ಕನ್ನಡಿಗ ಕೆಎಲ್ ರಾಹುಲ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಮೂಲಕ 97 ರನ್ ಬಾರಿಸಿದರು. ವಿರಾಟ್ ಕೊಹ್ಲಿ ಔಟಾದ ನಂತರ ಬಂದ ಹಾರ್ದಿಕ್ ಪಾಂಡ್ಯ 8 ಎಸೆತಗಳಲ್ಲಿ 1 ಸಿಕ್ಸರ್ ಸಮೇತ 11 ರನ್ ಗಳಿಸಿದರು. ಕೆಎಲ್ ರಾಹುಲ್ ಸಿಕ್ಸರ್ ಮೂಲಕ ತಂಡವನ್ನು ಗೆಲ್ಲಿಸಿದ್ದು ಸೊಗಸಾಗಿತ್ತು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಜೋಶ್ ಹೇಝಲ್‌ವುಡ್ 9 ಓವರ್‌ಗಳಲ್ಲಿ 38 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಉಳಿದಂತೆ ಮಿಚೆಲ್ ಸ್ಟಾರ್ಕ್ 8 ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಕೇವಲ 5 ರನ್‌ಗಳ ಜೊತೆಯಾಟ ನೀಡಿದರು. ಜಸ್ಪ್ರೀತ್ ಬುಮ್ರಾ ಎಸೆದ ಮೂರನೇ ಓವರ್‌ನ 2ನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರು ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ ತೆಗೆದುಕೊಂಡ ಅದ್ಭುತ ಕ್ಯಾಚ್‌ಗೆ ಔಟಾದರು.
ನಂತರ ಜೊತೆಗೂಡಿದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ 2ನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟ ನೀಡಿದರು. ತಂಡದ ಮೊತ್ತ 74 ರನ್‌ಗಳಾಗಿದ್ದಾಗ ಡೇವಿಡ್ ವಾರ್ನರ್ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. 52 ಎಸೆತಗಳನ್ನು ಎದುರಿಸಿದ ಡೇವಿಡ್ ವಾರ್ನರ್ 6 ಬೌಂಡರಿ ಸಮೇತ 41 ರನ್ ಗಳಿಸಿದರು.
ನಂತರ ಸ್ಟೀವನ್ ಸ್ಮಿತ್ 71 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 46 ಗಳಿಸಿದ್ದ ವೇಳೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ 41 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 27 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 25 ಎಸೆತಗಳಲ್ಲಿ 15 ರನ್ ಗಳಿಸಿದರೆ, ಅಲೆಕ್ಸ್ ಕ್ಯಾರಿ ಸೊನ್ನೆ ಸುತ್ತಿದರು. ನಾಯಕ ಪ್ಯಾಟ್ ಕಮ್ಮಿನ್ಸ್ ಒಂದು ಸಿಕ್ಸ್ ಮತ್ತು ಒಂದು ಬೌಂಡರಿ ಮೂಲಕ 15 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ 28 ರನ್ ಗಳಿಸಿದರೆ, ಆಡಮ್ ಝಂಪಾ 6 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ 10 ಓವರ್‌ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು.
ಉಳಿದಂತೆ ರವಿಚಂದ್ರನ್ ಅಶ್ವಿನ್ 10 ಓವರ್‌ಗಳಲ್ಲಿ 34 ರನ್ ನೀಡಿ 1 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 3 ಓವರ್‌ಗಳಲ್ಲಿ 25 ರನ್ ನೀಡಿ ಒಂದು ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 6.3 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications