ಭಾನುವಾರ, ಆಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇದೇ ವೇಳೆ ಭಾರತದ ಮಾಜಿ ನಾಯಕ ಹಾಗೂ ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 95 ರನ್‌ಗಳಿಗೆ ಔಟಾದಾಗ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ಅಸಾಧಾರಣ ದಾಖಲೆಯನ್ನು ಸರಿಗಟ್ಟಲು ಕೇವಲ 5 ರನ್‌ಗಳಿಂದ ವಿಫಲರಾಗಿದರು.

ವಿರಾಟ್ ಕೊಹ್ಲಿ ಸಿಕ್ಸರ್‌ನೊಂದಿಗೆ 49ನೇ ಶತಕದ ಹೆಗ್ಗುರುತನ್ನು ತಲುಪಲು ಪ್ರಯತ್ನಿಸುತ್ತಿದ್ದರು. ಆದರೆ ಬೌಂಡರಿಯಿಂದ ಸ್ವಲ್ಪ ದೂರದಲ್ಲಿ ಕ್ಯಾಚ್ ನೀಡಿ ಔಟಾದರು. ಆದರೂ, 95 ರನ್ ಗಳಿಸುವ ಹಾದಿಯಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಐಸಿಸಿ ವೈಟ್‌ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿದರು.
ವಿರಾಟ್ ಕೊಹ್ಲಿ ಸದ್ಯ ಐಸಿಸಿ ವೈಟ್‌ಬಾಲ್ ಟೂರ್ನಿಗಳಲ್ಲಿ 3,054 ರನ್ ಗಳಿಸಿದ್ದಾರೆ ಮತ್ತು ವೆಸ್ಟ್ ಇಂಡೀಸ್ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ 2,942 ರನ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತೀಯ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ 2,719 ರನ್‌ಗಳೊಂದಿಗೆ ಐಸಿಸಿ ವೈಟ್‌ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರರಾದರು. ಕೊಹ್ಲಿ ಇದೀಗ ಏಕದಿನ ಕ್ರಿಕೆಟ್‌ನಲ್ಲಿ 13,437 ರನ್ ಕಲೆಹಾಕಿದ್ದಾರೆ. ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಸನತ್ ಜಯಸೂರ್ಯ 13,430 ರನ್ ಗಳಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರನ್ನು ಹಿಂದಿಕ್ಕಿದರು.
ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 18,426 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ 14,234 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 13704 ಏಕದಿನ ರನ್ ಕಲೆಹಾಕಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
"ನಾವು ಗೆದ್ದಿದ್ದಕ್ಕೆ ಸಂತೋಷವಾಗಿದೆ. ವಿರಾಟ್ ಕೊಹ್ಲಿ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ. ಅವರು ಇಷ್ಟು ವರ್ಷ ನಮಗಾಗಿ ಅದನ್ನು ಮಾಡಿದ್ದಾರೆ. ನಾವು ಮಧ್ಯದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಾಗ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಪಂದ್ಯವನ್ನು ನಮ್ಮತ್ತ ತೆಗೆದುಕೊಂಡು ಬಂದರು," ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಿಳಿಸಿದರು.
"ಫೀಲ್ಡಿಂಗ್ ನಮಗೆ ಹೆಮ್ಮೆಯ ವಿಷಯ. ಇಂದು ಫೀಲ್ಡಿಂಗ್ ಅಷ್ಟೊಂದು ಕ್ಲಿನಿಕಲ್ ಆಗಿರಲಿಲ್ಲ ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತವೆ," ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು.
ಈ ಮಧ್ಯೆ, ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 20 ವರ್ಷಗಳ ಸೋಲಿನ ಸರಪಳಿಯನ್ನು ಕೊನೆಗೊಳಿಸಿತು. ದಕ್ಷಿಣ ಆಫ್ರಿಕಾದಲ್ಲಿ 2003ರ ಏಕದಿನ ವಿಶ್ವಕಪ್ ನಂತರ ಕಿವೀಸ್ ವಿರುದ್ಧ ಭಾರತಕ್ಕೆ ಇದು ಮೊದಲ ಗೆಲುವಾಗಿದೆ.
ವೇಗಿ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೊಂದಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು.
"ಎಲ್ಲಾ ವಿಕೆಟ್‌ಗಳು ಚೆನ್ನಾಗಿವೆ. ನೀವು ದೇಶಕ್ಕಾಗಿ ಆಡುವಾಗ, ಪ್ರತಿ ವಿಕೆಟ್ ನಿಮಗೆ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ನಾನು ಯಾವುದೇ ನಿರ್ದಿಷ್ಟ ವಿಕೆಟ್ ಅನ್ನು ಹೆಚ್ಚು ಇಷ್ಟಪಡುವುದಿಲ್ಲ, ಪ್ರತಿ ವಿಕೆಟ್ ಮೌಲ್ಯಯುತವಾಗಿದೆ. ನನ್ನ ಎಲ್ಲಾ ವಿಕೆಟ್‌ಗಳನ್ನು ನಾನು ಆನಂದಿಸುತ್ತೇನೆ," ಎಂದು ಮೊಹಮ್ಮದ್ ಶಮಿ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.