World Cup 2023: ಈತ ವಿಶ್ವಕಪ್ ಆಡುತ್ತಿದ್ದರೆ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್; ಕೆ ಶ್ರೀಕಾಂತ್
2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ 100 ದಿನಗಳು ಬಾಕಿ ಇರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಮುಂಬೈನಲ್ಲಿ ಮಂಗಳವಾರ, ಜೂನ್ 27ರಂದು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ ಪ್ರಮುಖ 10 ಸ್ಥಳಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಫೈನಲ್ ಸೇರಿದಂತೆ 48 ಪಂದ್ಯಗಳನ್ನು ಒಳಗೊಂಡಿರುತ್ತದೆ.

ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ಸೆಣಸಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದ್ದರೆ, ನವೆಂಬರ್ 19ರಂದು ಅದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು 2023ರ ವಿಶ್ವಕಪ್ ಕುರಿತು ಮಾತನಾಡಿದ್ದು, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ವಿಶ್ವಕಪ್ ವೇಳೆಗೆ ಆಡಲು ಫಿಟ್ ಆಗಿದ್ದರೆ, ಭಾರತ ತಂಡವೇ ಏಕದಿನ ವಿಶ್ವಕಪ್‌ನ ನಿಜವಾದ ಫೇವರಿಟ್ ತಂಡವಾಗಿರುತ್ತಿತ್ತು ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್ ಪಂತ್ ಸದ್ಯ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಬೆಂಗಳೂರಿನ ಎನ್‌ಸಿಎನಲ್ಲಿ ಇತರ ಆಟಗಾರರೊಂದಿಗೆ ಪುನರ್ವಸತಿ ಪಡೆಯುತ್ತಿದ್ದಾರೆ.

ಅಪಘಾತಕ್ಕೂ ಮುನ್ನ ಎಡಗೈ ಬ್ಯಾಟರ್ ರಿಷಭ್ ಪಂತ್ 2022ರಲ್ಲಿ ಆಡಿದ 12 ಪಂದ್ಯಗಳಲ್ಲಿ 336 ರನ್ ಗಳಿಸಿದ್ದರು. ಇದರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 125 ರನ್ ಸೇರಿದೆ.
ದೆಹಲಿ ಮೂಲದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ನಿರಂತರವಾಗಿ ಪ್ರಗತಿ ಮತ್ತು ತಮ್ಮ ಚೇತರಿಕೆಯ ಪ್ರಯಾಣವನ್ನು ತಿಳಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದರೂ, 25 ವರ್ಷದ ಆಟಗಾರ ಮೈದಾನಕ್ಕೆ ಹಿಂತಿರುಗುವುದು ಇನ್ನೂ ಖಚಿತವಾಗಿಲ್ಲ.
ಜೂನ್ 27ರಂದು ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆತಿಥೇಯರ ಮೊದಲ ಪಂದ್ಯವು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ರಿಷಭ್ ಪಂತ್ ಫಿಟ್ ಆಗಿದ್ದರೆ ಮತ್ತು ಆಡುತ್ತಿದ್ದರೆ, ಭಾರತ ತಂಡವು ವಿಶ್ವಕಪ್ ಗೆಲ್ಲುವ ನಿಜವಾದ ನೆಚ್ಚಿನ ತಂಡವಾಗಿರುತ್ತದೆ ಎಂದು ಹೇಳಿದರು.
ಐಸಿಸಿ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ರಿಷಭ್ ಪಂತ್ ಉಪಸ್ಥಿತಿ ನಿರ್ಣಾಯಕವಾಗಿರಲಿದೆ ಎಂದು ಮಾಜಿ ಮುಖ್ಯ ಆಯ್ಕೆಗಾರರಾಗಿರುವ ಕೆ ಶ್ರೀಕಾಂತ್ ತಿಳಿಸಿದರು.
"ರಿಷಭ್ ಪಂತ್ ಅವರು ಆಡುತ್ತಿದ್ದರೆ, ವಿಶ್ವಕಪ್‌ನಲ್ಲಿ ಭಾರತವೇ ನಿಜವಾದ ಫೇವರಿಟ್ ಎಂದು ನಾನು ನೇರವಾಗಿ ಹೇಳುತ್ತಿದ್ದೆ. ಸದ್ಯ ರಿಷಭ್ ಫಿಟ್‌ನೆಸ್ ಪ್ರಶ್ನಾರ್ಹವಾಗಿದೆ. 2023ರ ವಿಶ್ವಕಪ್ ಪಂದ್ಯಾವಳಿ ಆಡುತ್ತಾರೆಯೇ ಎಂದು ಹಲವರು ಅನುಮಾನಿಸುತ್ತಿದ್ದಾರೆ. ಇಲ್ಲದಿದ್ದರೆ, ರಿಷಭ್ ಪಂತ್ ಅಂಶವು ಬಹಳ ನಿರ್ಣಾಯಕವಾಗುತ್ತಿತ್ತು," ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟರು.
ರಿಷಭ್ ಪಂತ್ ಅನುಪಸ್ಥಿತಿಯ ಹೊರತಾಗಿಯೂ, ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದು ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರ ಪ್ರದರ್ಶನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ.
"ಕೆಎಲ್ ರಾಹುಲ್ ಅವರಂತಹ ಆಟಗಾರರು ಮಧ್ಯಮ ಕ್ರಮಾಂಕಕ್ಕೆ ಮರಳಬೇಕು ಎಂದು ನಾನು ಭಾವಿಸುತ್ತೇನೆ. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಅದ್ಭುತವಾಗಿದ್ದಾರೆ. ಶುಭ್ಮನ್ ಗಿಲ್ ಅವರೊಂದಿಗೆ ರೋಹಿತ್ ಶರ್ಮಾ ಇನ್ನಿಂಗ್ಸ್ ತೆರೆಯಲಿದ್ದಾರೆ. ನಂತರ ವಿರಾಟ್ ಕೊಹ್ಲಿ ಇದ್ದಾರೆ, ಅವರು ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ ಮತ್ತು ಫಾರ್ಮ್‌ನಲ್ಲಿದ್ದಾರೆ. ಭಾರತ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ನಾನು ನಂಬುತ್ತೇನೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications