ರೋಹಿತ್ ಭಾರತ ತಂಡದ ನಾಯಕನಾಗದಿದ್ದರೆ ದೇಶದ ದುರಾದೃಷ್ಟ, ಆತನದ್ದಲ್ಲ: ಗೌತಮ್ ಗಂಭೀರ್

ಐದನೇ ಬಾರಿಗೆ ಮುಂಬೈ ಐಪಿಎಲ್ ಚಾಂಪಿಯನ್ ಆಗುವ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಸಾಧನೆಯ ಜೊತೆಗೆ ಟೀಮ್ ಇಂಡಿಯಾ ನಾಯಕತ್ವದ ಬಗ್ಗೆಯೂ ಚರ್ಚೆ ಆರಂಭವಾಗಿದೆ. ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕನಾಗಲಿ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ.
ಈ ಹಿಂದೆಯೂ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ನಾಯಕನಾಗಲಿ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆದಿತ್ತು. ಈಗ ರೋಹಿತ್ ಮತ್ತೊಂದು ಟ್ರೋಫಿ ತಮ್ಮ ಹೆಸರಿಗೆ ಬರೆದುಕೊಳ್ಳುವ ಮೂಲಕ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಕಾರಣರಾಗಿದ್ದಾರೆ. ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಭವಿಷ್ಯದಲ್ಲಿ ಮುನ್ನಡೆಸದಿದ್ದರೆ ಅದು ಅವಮಾನಕರ ಸಂಗತಿ ಎಂದಿದ್ದಾರೆ ಗೌತಮ್ ಗಂಭೀರ್.

ಭಾರತದ ದುರಾದೃಷ್ಟ
ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ವಿಚಾರವನ್ನು ಮುಂದಿಟ್ಟುಕೊಂಡು ಗಂಭೀರ್ ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿಯೇ ಮಂಡಿಸಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸದಿದ್ದರೆ ಅದು ಆತನ ದುರಾದೃಷ್ಟವಲ್ಲ. ಅದು ಭಾರತದ ದುರಾದೃಷ್ಟ ಎಂದು ಗಂಭೀರ್ ಹೇಳಿದ್ದಾರೆ.

ಒಂದೇ ಮಾಪನದಲ್ಲಿ ಅಳೆಯಲಿ
ಇನ್ನು ಇದೇ ಸಂದರ್ಭದಲ್ಲಿ ಗಂಭೀರ್ ಉತ್ತಮ ನಾಯಕತ್ವವನ್ನು ಅಳೆಯಲು ಎಲ್ಲರಿಗೂ ಒಂದೇ ಮಾಪನವನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ. ಧೋನಿ ಎರಡು ವಿಶ್ವಕಪ್ ಹಾಗೂ ಮೂರು ಐಪಿಎಲ್ ಟ್ರೋಫಿ ಗೆದ್ದ ಕಾರಣಕ್ಕೆ ಅವರನ್ನು ಉತ್ತಮ ನಾಯಕ ಎನ್ನುತ್ತೇವೆ. ಅದೇ ಮಾಪನವನ್ನು ರೋಹಿತ್ ವಿಚಾರದಲ್ಲೂ ಬಳಸಿಕೊಳ್ಳಬೇಕು ಎಂದಿದ್ದಾರೆ.

ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ
"ರೋಹಿತ್ ಶರ್ಮಾ ಕೂಡ ಉತ್ತಮ ನಾಯಕ ಯಾಕೆಂದರೆ ಆತ 5 ಐಪಿಎಲ್ ಗೆದ್ದಿದ್ದಾರೆ. ಇದನ್ನು ಹೊರತುಪಡಿಸಿಯೂ ಟಿ20 ಕ್ರಿಕೆಟ್ ಅಥವಾ ಸೀಮಿತ ಓವರ್‌ಗಳ ನಾಯಕತ್ವ ನೀಡದಿದ್ದರೆ ಅದು ಅವಮಾನಕರ. ಯಾಕೆಂದರೆ ಇದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿಲ್ಲ" ಎಂದಿದ್ದಾರೆ ಗಂಭೀರ್.

ನಾಯಕತ್ವದ ವಿಭಜನೆ ಉತ್ತಮ
ಇದೇ ಸಂದರ್ಭದಲ್ಲಿ ನಾಯಕತ್ವದ ವಿಭಜನೆ ಉತ್ತಮ ಎಂಬ ಅಭಿಪ್ರಾಯವನ್ನು ಗಂಭೀರ್ ವ್ಯಕ್ತಪಡಿಸಿದ್ದಾರೆ. "ನಾಯಕತ್ವ ವಿಭಜನೆ ಮಾಡಿದರೆ ತಪ್ಪೇನಿಲ್ಲ. ಯಾಕೆಂದರೆ ರೋಹಿತ್ ಶರ್ಮಾ ತಮ್ಮ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ತೋರಿಸಿದ್ದಾರೆ. ಓರ್ವ ಐದು ಬಾರಿ ಐಪಿಎಲ್ ಗೆದ್ದಿದ್ದರೆ ಇನ್ನೋರ್ವ ಒಂದು ಬಾರಿಯೂ ಗೆಲ್ಲಲು ಸಾಧ್ಯವಾಗಿಲ್ಲ" ಎಂದಿದ್ದಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೆಟ್ಟ ನಾಯಕ ಅಲ್ಲದಿರವಬಹುದು, ಆದರೆ ಆತನ ಮುಂದೆ ರೋಹಿತ್ ಸಾಧನೆ ಶ್ರೇಷ್ಠವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications