ಯುನೈಟೆಡ್ ಸ್ಟೇಟ್ಸ್ ವೇಗದ ಬೌಲರ್ ಕೈಲ್ ಫಿಲಿಪ್ ಅವರ ಬೌಲಿಂಗ್ ಶೈಲಿಯ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಾನೂನುಕ್ರಮ ತೆಗೆದುಕೊಂಡಿದೆ. ಕೈಲ್ ಫಿಲಿಪ್ ಅವರು ನಡೆಸುವ ಬೌಲಿಂಗ್ ಶೈಲಿಯನ್ನು ನಿಯಮಬಾಹಿರ ಎಂದು ಪರಿಗಣಿಸಿರುವ ಐಸಿಸಿ ಐಸಿಸಿ ಇವೆಂಟ್ ಪ್ಯಾನೆಲ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
18 ಜೂನ್ 2023 ರಂದು ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದ ನಂತರ ಪಂದ್ಯದ ಅಧಿಕಾರಿಗಳು ಯುಎಸ್‌ಎ ವೇಗಿಯ ವಿರುದ್ಧ ವರದಿ ಮಾಡಿದ್ದರು. ಅದಾದ ಬಳಿಕ ಈವೆಂಟ್ ಪ್ಯಾನೆಲ್ ಫಿಲಿಪ್ ಈ ಪಂದ್ಯದಲ್ಲಿ ಮಾಡಿದ ಬೌಲಿಂಗ್ ಆಕ್ಷನ್‌ನ ವಿಡಿಯೋ ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ನಿಯಮಕ್ಕೆ ವಿರುದ್ಧವಾದ ಬೌಲಿಂಗ್ ಶೈಲಿಯನ್ನು ಫಿಲಿಪ್ ಹೊಂದಿರುವುದನ್ನು ಖಚಿತಪಡಿಸಿದೆ. ಹೀಗಾಗಿ ಆರ್ಟಿಕಲ್ 6.7 ರ ನಿಯಮದ ಪ್ರಕಾರ ಕೈಪ್ ಫಿಲಿಪ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನು ಅಮಾನತುಗೊಳಿಸಲಾಗಿದೆ.

ಕೈಲ್ ಫಿಲಿಪ್ ತಮ್ಮ ಬೌಲಿಂಗ್ ಶೈಲಿಯನ್ನು ಪುನರ್‌ಪರಿಶೀಲಿಸುವಂತೆ ಮನವಿ ಸಲ್ಲಿಸಿ ಐಸಿಸಿ ಅವರ ಬೌಲಿಂಗ್ ಶೈಲಿ ಕಾನೂನುಬದ್ಧವಾಗಿದೆ ಎಂಬುದನ್ನು ತೀರ್ಮಾನಿಸುವವರೆಗೂ ಅವರ ಬೌಲಿಂಗ್‌ನ ಮೇಲಿರುವ ಅಮಾನತು ಮುಂದುವರಿಯಲಿದೆ. ಹೀಗಾಗಿ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಂಡ ಬಳಿಕ ಯುಎಸ್‌ಎಯ ಈ ವೇಗಿ ಬೌಲಿಂಗ್ ದಾಳಿಗಿಳಿಯಬೇಕಿದೆ.
ಪ್ರಸ್ತುತ ಜಿಂಬಾಬ್ವೆಯಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಳುಗಳು ನಡೆಯುತ್ತಿದ್ದು ಕೈಲ್ ಫಿಲಿಪ್ ಯುಎಸ್‌ಎ ತಂಡದ ಸದಸ್ಯರಾಗಿದ್ದಾರೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕಣಕ್ಕಿಳಿದಿದ್ದಾಗ ಯುಎಸ್‌ಎ ಪರವಾಗಿ ಕೈಲ್ ಫಿಲಿಪ್ ಅದ್ಭುತ ಬೌಲಿಂಗ್ ದಾಳಿ ಪ್ರದರ್ಶಿಸಿ ಉತ್ತಮ ಆರಂಭ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಮೂವರು ದಾಂಡಿಗರನ್ನು ಫೆವಿಲಿಯನ್‌ಗೆ ಅಟ್ಟಿ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿದ್ದರು. ಆದರೆ ಪಂದ್ಯವನ್ನು ಯುಎಸ್‌ಎ ಸೋತಿತ್ತು.
ಇನ್ನು ಯುಎಸ್‌ಎ ಈ ವರ್ಲ್ಡ್ ಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಹೀನಾಯ ಸ್ಥಿತಿಯಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದ್ದು ಪ್ರಸ್ತುತ ಎ ಗುಂಪಿಯನಲ್ಲಿ ಕೊನೆಯ ಸ್ಥಾನದಲ್ಲಿದೆ. ಗುರುವಾರ ಹರಾರೆಯಲ್ಲಿ ಐದು ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 39 ರನ್‌ಗಳ ಅಂತರದಿಂದ ಸೋಲು ಅನುಭವಿಸಿದ್ದರೆ ಅದಾದ ಬಳಿಕ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. ನಂತರ ನೆದರ್ಲೆಂಡ್ಸ್ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಶರಣಾಗಿದೆ. ಜಿಂಬಾಬ್ವೆ ವಿರುದ್ಧ ಒಂದು ಪಂದ್ಯ ಮಾತ್ರವೇ ಲೀಗ್ ಹಂತದಲ್ಲಿ ಬಾಕಿಯಿದ್ದು ಜೂನ್ 26ರಂದು ಆಯೋಜನೆಯಾಗಲಿದೆ. ಈ ಪಂದ್ಯದಲ್ಲಿ ಗೆದ್ದು ಸತತ ಸೋಲಿನ ಅವಮಾನದಿಂದ ಹೊರಬರುವುದು ಯುಎಸ್‌ಎ ತಂಡದ ಗುರಿಯಾಗಿರುವುದರಲ್ಲಿ ಅನುಮಾನವಿಲ್ಲ.
ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿರುವ ಯುಎಸ್‌ಎ ತಂಡ: ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಮೊನಾಂಕ್ ಪಟೇಲ್ (c & wk), ಆರನ್ ಜೋನ್ಸ್, ಸೈತೇಜ ಮುಕ್ಕಮಲ್ಲ, ಗಜಾನಂದ್ ಸಿಂಗ್, ಶಯಾನ್ ಜಹಾಂಗೀರ್, ಜಸ್ದೀಪ್ ಸಿಂಗ್, ನೊಸ್ತುಶ್ ಕೆಂಜಿಗೆ, ಕೈಲ್ ಫಿಲಿಪ್, ಸೌರಭ್ ನೇತ್ರವಲ್ಕರ್, ನಿಸರ್ಗ್ ಪಟೇಲ್, ಅಲಿ ಖಾನ್, ಅಭಿಷೇಕ್ ಪರಾಡ್ಕರ್, ಉಸ್ಮಾನ್ ರಫೀಕ್