ಚಿತ್ರಗಳು : ಲಾರ್ಡ್ಸ್ ವಿಜಯೋತ್ಸವದ ನೆನಪಿನ ಕ್ಷಣಗಳು
ಲಂಡನ್, ಜು. 22 : ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಪಂದ್ಯ ಗೆದ್ದು ಭಾರತಕ್ಕೆ 28 ವರ್ಷಗಳಾಗಿದ್ದವು! ಅಚ್ಚರಿಯೆನಿಸಿದರೂ ಇದು ನಿಜವಾದ ಸಂಗತಿ. ಈಗ ಆ ಕನಸು ನಿಜವಾಗಿದ್ದು, ಭಾರತ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 95 ರನ್ ಗಳ ಅರ್ಹ ಜಯ ಗಳಿಸಿ ಇತಿಹಾಸ ನಿರ್ಮಿಸಿದೆ.
1986ರ ಜೂನ್ ನಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಲಾರ್ಡ್ಸ್ ನಲ್ಲಿ ಜಯಭೇರಿ ಬಾರಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ವಿಜಯ ಮರೀಚಿಕೆಯಾಗಿತ್ತು. ಅಲ್ಲದೆ, ವಿದೇಶ ನೆಲದಲ್ಲಿ ಜಯ ಕಾಣದೆ ಭಾರತಕ್ಕೆ 15 ವರ್ಷಗಳು ಕಳೆದಿದ್ದವು. ಇದೆಲ್ಲ ಕಹಿನೆನಪನ್ನು ಜು.21ರಂದು ಪಡೆದ ವಿಜಯ ಅಳಿಸಿಹಾಕಿದೆ.
ಇಶಾಂತ್ ಶರ್ಮಾ 74 ರನ್ ಗಳಿಗೆ 7 ವಿಕೆಟ್ ಪಡೆದು ಜಯದ ರೂವಾರಿಯಾದರೂ ಭಾರತ ಒಂದು ತಂಡವಾಗಿ ಆಡಿದ್ದರಿಂದ ಜಯ ಗಳಿಸಲು ಸಾಧ್ಯವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಅಜಿಂಕ್ಯಾ ರಹಾನೆ ಶತಕ ಬಾರಿಸಿದ್ದರೆ, ಭುವನೇಶ್ವರ್ ಕುಮಾರ್ 6 ವಿಕೆಟ್ ಕಬಳಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ವಿಜಯ್, ಜಡೇಜಾ, ಭುವನೇಶ್ವರ್ ಕುಮಾರ್ ಉತ್ತಮ ಅರ್ಧ ಶತಕ ಗಳಿಸಿ ಉತ್ತಮ ಮೊತ್ತ ಪೇರಿಸಿದ್ದರು.
ಹೀನಾಯವಾಗಿ ಸೋತಾಗ ಹಿಗ್ಗಾಮುಗ್ಗಾ ತೆಗಳುವುದು, ವಿಜಯ ಸಾಧಿಸಿದಾಗ ಭಾರತ ತಂಡದ ಆಟಗಾರರನ್ನು ಯದ್ವಾತದ್ವಾ ಹೊಗಳುವುದನ್ನು ಮೊದಲು ನಿಲ್ಲಿಸಬೇಕೆಂದು ನಮ್ಮ ಓದುಗರೊಬ್ಬರು ಉತ್ತಮ ಸಲಹೆ ನೀಡಿದ್ದಾರೆ. ಐದು ಟೆಸ್ಟ್ ಗಳ ಸರಣಿಯ ಮೊದಲ ಫಲಿತಾಂಶದ ಮೋಹಕ ಕ್ಷಣಗಳತ್ತ ಕಣ್ಣು ಹಾಯಿಸೋಣ ಬನ್ನಿ. [ಲಾರ್ಡ್ಸ್ ನಲ್ಲಿ ಧೋನಿ ಪಡೆಗೆ ಐತಿಹಾಸಿಕ ಜಯ]

ಐತಿಹಾಸಿಕ ಜಯ ತಂದಿತ್ತ ಆ ಕ್ಷಣ
ಕಡೆಯ ಆಟಗಾರ ಜೇಮ್ಸ್ ಆಂಡರ್ಸನ್ ಅವರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ಕೂಡಲೆ ಭಾರತದ ಆಟಗಾರರೆಲ್ಲ ಹುಚ್ಚೆದ್ದು ಕುಣಿದಾಡಿದರು.

ಜಡೇಜಾ, ಆಂಡರ್ಸನ್ ನಡುವೆ ಆಲ್ ಈಸ್ ವೆಲ್
95 ರನ್ ಜಯ ಗಳಿಸಿದ ಕೂಡಲೆ ಜಡೇಜಾ ಅವರನ್ನು ಆಂಡರ್ಸನ್ ಅಭಿನಂದಿಸಿದರು. ಮೊದಲನೇ ಟೆಸ್ಟ್ ನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ತ್ವೇಷಮಯ ವಾತಾವರಣ ಸೃಷ್ಟಿಯಾಗಿತ್ತು.

ಹೀರೋ ಆಗಿ ಮೆರೆದಾಡಿದ ಇಶಾಂತ್ ಶರ್ಮಾ
ಇಶಾಂತ್ ಶರ್ಮಾ ಏಳು ವಿಕೆಟ್ ಪಡೆದು ಭಾರತದ ಪರ ಹೀರೋ ಆಗಿ ಪರಿಣಮಿಸಿದರು. ಈ ಸಾಧನೆ ಅವರಿಗೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ತಂದಿತ್ತಿತು.

ನಾಯಕ ಧೋನಿಯನ್ನು ಅಭಿನಂದಿಸುತ್ತಿರುವ ಇಶಾಂತ್
ಈ ಸಾಧನೆಯ ಹಿಂದೆ ನಾಯಕ ಧೋನಿ ಅವರ ಟ್ರಿಕ್ ಕೆಲಸ ಮಾಡಿದೆ ಎಂದು ಇಶಾಂತ್ ಹೇಳಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸಮನ್ ರಿಗೆ ಶಾರ್ಟ್ ಪಿಚ್ ಬೌಲಿಂಗ್ ಮಾಡಿದ್ದೇ ವಿಜಯಕ್ಕೆ ಸೋಪಾನವಾಯಿತು ಎಂದು ಅವರು ತಿಳಿಸಿದರು.

ಆಪದ್ಭಾಂಧವನಂತೆ ಆಡಿದ ರವೀಂಜ್ ಜಡೇಜಾ
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ರವೀಂದ್ರ ಜಡೇಜಾ ಉತ್ತಮ ಅರ್ಧ ಶತಕ ಗಳಿಸಿ ಭಾರತಕ್ಕೆ ಉತ್ತಮ ಮೊತ್ತ ಗಳಿಸಲು ನೆರವಾದರು.

ಭದ್ರ ಬುನಾದಿ ಹಾಕಿಕೊಟ್ಟ ಮುರಳಿ ವಿಜಯ್
ಎರಡನೇ ಇನ್ನಿಂಗ್ಸ್ ನಲ್ಲಿ 95 ರನ್ ಗಳಿಸಿ ವಿಜಯ್ ಅವರು ಭದ್ರ ಬುನಾದಿ ಹಾಕಿಕೊಟ್ಟಿದ್ದರಿಂದಲೇ 319 ರನ್ ಗಳಿಸಲು ಭಾರತಕ್ಕೆ ಸಾಧ್ಯವಾಯಿತು.

ಹುಚ್ಚೆದ್ದು ಕುಣಿದಾಡಿದ ರವೀಂದ್ರ ಜಡೇಜಾ
ಜೇಮ್ಸ್ ಆಂಡರ್ಸನ್ ಅವರನ್ನು ಕೊನೆಯದಾಗಿ ಔಟ್ ಮಾಡಿದ ಕೂಡಲೆ ರವೀಂದ್ರ ಜಡೇಜಾ ಅವರು ಇತರ ಆಟಗಾರರೊಂದಿಗೆ ಸಂಭ್ರಮಿಸುತ್ತಿರುವುದು.

ಉತ್ತಮ ಬೌಲಿಂಗ್ ಸಹಕಾರ ನೀಡಿದ ಶಮಿ
ಅತ್ಯದ್ಭುತವಾಗಿ ಬೌಲಿಂಗ್ ಮಾಡದಿದ್ದರೂ ಮತ್ತು ಹೆಚ್ಚಿನ ಯಶಸ್ಸು ಗಳಿಸದಿದ್ದರೂ ಮೊಹಮ್ಮದ್ ಶಮಿ ಅವರು ಎರಡೂ ಇನ್ನಿಂಗ್ಸ್ ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾಗೆ ಉತ್ತಮ ಸಹಕಾರ ನೀಡಿದರು.

ಎರಡನೇ ಇನ್ನಿಂಗ್ಸ್ ನಲ್ಲಿ ಯಶ ಕಂಡ ಇಶಾಂತ್
ಮೊದಲನೇ ಇನ್ನಿಂಗ್ಸ್ ನಲ್ಲಿ ಒಂದೂ ವಿಕೆಟ್ ಗಳಿಸದಿದ್ದರೂ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರರನ್ನು ಕಾಡಿದ ಇಶಾಂತ್ ಶರ್ಮಾ ಕಡೆಗೂ ಯಶಸ್ಸು ಕಂಡರು.

ಈ ಸರಣಿ ಕಂಡ ಅತ್ಯುತ್ತಮ ಆಲ್ ರೌಂಡರ್
ಭುವನೇಶ್ವರ್ ಕುಮಾರ್ ವೇಗಿಯಾಗಿದ್ದರೂ ಬ್ಯಾಟಿಂಗ್ ನಲ್ಲಿಯೂ ಮಿಂಚುತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 36 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧ ಸೆಂಚುರಿ ಬಾರಿಸಿ ಭಾರತವನ್ನು ಪಾರು ಮಾಡಿದರು.

ಮೊದಲ ಇನ್ನಿಂಗ್ಸ್ ಶತಕ ವೀರ ಅಜಿಂಕ್ಯಾ ರಹಾನೆ
ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಅಜಿಂಕ್ಯಾ ರಹಾನೆ ಗಳಿಸಿದ ಶತಕ (103) ಭಾರೀ ಮಹತ್ವದ್ದಾಗಿದೆ. ಏಕೆಂದರೆ, ಮೊದಲ ಇನ್ನಿಂಗ್ಸ್ ನಲ್ಲಿ ಎರಡನೇ ದೊಡ್ಡ ಮೊತ್ತವೆಂದರೆ 36.

ಮೊದಲ ಇನ್ನಿಂಗ್ಸ್ ಬೌಲಿಂಗ್ ವೀರ ಕುಮಾರ್
ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 1 ವಿಕೆಟ್ ಪಡೆದರೂ ಭುವನೇಶ್ವರ್ ಕುಮಾರ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.

ವಿರಾಟ್ ಕೋಹ್ಲಿ ಗೋಲ್ಡನ್ ಡಕ್
ಭಾರತದ ಉಪನಾಯಕ ಎರಡೂ ಇನ್ನಿಂಗ್ಸ್ ನಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 25 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಗೋಲ್ಡನ್ ಡಕ್ ಪಡೆದು ನಿರಾಶೆ ಮೂಡಿಸಿದರು.

ವಿಕೆಟ್ ಪಡೆದ ಸಂತಸದಲ್ಲಿ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಎರಡೂ ಇನ್ನಿಂಗ್ಸ್ ಸೇರಿ ಮೂರು ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಎರಡು ಮತ್ತು ಎರಡನೇಯದರಲ್ಲಿ ಒಂದು ವಿಕೆಟ್ ಕಬಳಿಸಿದರು.

ಲಾರ್ಡ್ಸ್ ನಲ್ಲಿ ದಾಖಲೆ ಬರೆದ ಇಶಾಂತ್ ಶರ್ಮಾ
ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಇಶಾಂತ್ ಪಾತ್ರರಾಗಿದ್ದಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಇಶಾಂತ್ 7 ವಿಕೆಟ್ ಪಡೆದು ಭಾರತಕ್ಕೆ ಜಯ ತಂದಿತ್ತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications