ಇಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕಾರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದೆ. ಪರ್ತ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಭಾರತ ತಂಡವನ್ನು ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಹಂಗಾಮಿ ನಾಯಕನಾಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅವರು ಆಸ್ಟ್ರೇಲಿಯಾ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಈ ಇಬ್ಬರು ನಾಯಕರಿಗೆ ಬಾರ್ಡರ್ ಗವಾಸ್ಕಾರ್ ಟ್ರೋಫಿ ಟೆಸ್ಟ್ ಸರಣಿ ಗೆಲ್ಲುವುದು ಪ್ರಮುಖವಾಗಿದೆ. ಹೀಗಾಗಿ ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಪ್ಯಾಟ್ ಕಮ್ಮಿನ್ಸ್ ಇತಿಹಾಸ ಸೃಷ್ಟಿಸಿದ್ದಾರೆ. ಬುಮ್ರಾ ಮತ್ತುಕಮಿನ್ಸ್ ಟಾಸ್‌ಗಾಗಿ ಆಪ್ಟಸ್ ಸ್ಟೇಡಿಯಂ ಬಂದಾಗ, ಕ್ರಿಕೆಟ್‌ನಲ್ಲಿ ಹಿಂದೆಂದೂ ನೋಡಿರದ ಘಟನೆಗೆ ಪರ್ತ್ ಸಾಕ್ಷಿಯಾಯಿತು. ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಎರಡು ತಂಡಗಳು ವೇಗದ ಬೌಲರ್‌ಗಳು ನಾಯಕತ್ವ ವಹಿಸುತ್ತಿರುವುದು 77 ವರ್ಷಗಳಲ್ಲಿ ಇದೇ ಮೊದಲು. 2021ರ ಅಂತ್ಯದಿಂದ ಕಮ್ಮಿನ್ಸ್ ಆಸ್ಟ್ರೇಲಿಯಾದ ನಾಯಕರಾಗಿದ್ದರೆ, ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅವರನ್ನು ಭಾರತದ ನಾಯಕರನ್ನಾಗಿ ಮಾಡಲಾಗಿದೆ.

ಕಪಿಲ್ ದೇವ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ ಕೊನೆಯ ಭಾರತೀಯ ವೇಗದ ಬೌಲರ್. ಅವರು 1985-86 ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.ಈಗ ಬುಮ್ರಾ ಅವರು ಆಸ್ಟ್ರೇಲಿಯಾದ ನೆಲದಲ್ಲಿ ಟೀಮ್ ಇಂಡಿಯಾದ ನಾಯಕನಾಗಿರುವ ಎರಡನೇ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಯಾವುದೇ ವೇಗದ ಬೌಲರ್ ನಾಯಕತ್ವ ವಹಿಸಿಲ್ಲ. ಹೀಗಾಗಿ ಪ್ಯಾಟ್ ಕಮಿನ್ಸ್ ತಮ್ಮ ಹೆಸರಿನಲ್ಲಿ ಬೃಹತ್ ದಾಖಲೆ ಮಾಡಿದ್ದಾರೆ.
ಭಾರತ ಮೊದಲು 1947/48 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು. ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಈ ಸರಣಿಯಲ್ಲಿ ಭಾರತ 0-4 ಅಂತರದ ಸೋಲನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ಆಸ್ಟ್ರೇಲಿಯಾವನ್ನು ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್ ಮುನ್ನಡೆಸಿದ್ದರು. ಇತ್ತ ಭಾರತದ ನಾಯಕತ್ವ ಆಲ್ ರೌಂಡರ್ ಲಾಲಾ ಅಮರನಾಥ್ ಅವರ ಕೈಯಲ್ಲಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಭಾರೀ ಕುತೂಹಲಕಾರಿ ಆಗಿರುತ್ತದೆ. ಉಭಯ ತಂಡಗಳು ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ ಕಳೆದ ಒಂದು ದಶಕಗಳಿಂದ ಭಾರತ ವಿರುದ್ಧ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲಲು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ 2018-19 ಮತ್ತು 2020-21ರಲ್ಲಿ ಐತಿಹಾಸಿಕ ವಿಜಯಗಳನ್ನು ಭಾರತ ಸಾಧಿಸಿತ್ತು.