Ind Vs Aus Test: ಮಧ್ಯಮ ಕ್ರಮಾಂಕದಲ್ಲಿ ಆಡಲು ಸಿದ್ಧ: ಪ್ಲೇಯಿಂಗ್ XI ಇನ್ನು ನಿರ್ಧರಿಸಿಲ್ಲ ಎಂದ ಕೆಎಲ್ ರಾಹುಲ್

ಬಾರ್ಡರ್ ಗವಾಸ್ಕರ್ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸರಣಿಯ ಮೊದಲನೇ ಪಂದ್ಯಕ್ಕೆ ಆತಿಥ್ಯ ವಹಿಸಲು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಕ್ರೀಡಾಂಗಣ ಸಜ್ಜಾಗಿದೆ.
ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಬಳಗ ಹೇಗಿರುತ್ತದೆ. ಪಿಚ್ ಹೇಗಿರಬಹುದು, ಯಾರಿಗೆಲ್ಲಾ ಆಡಲು ಅವಕಾಶ ಸಿಗುತ್ತದೆ ಎನ್ನುವ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ಉಭಯ ತಂಡಗಳು ನಾಗ್ಪುರದಲ್ಲಿ ಕಠಿಣ ಅಭ್ಯಾಸ ಮಾಡುತ್ತಿವೆ.
ಈ ನಡುವೆಯೇ ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್, ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ತಂಡದ ಒಳಗಡೆ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಯಾರು ವಿಕೆಟ್ ಕೀಪರ್ ಆಗಲಿದ್ದಾರೆ ಎನ್ನುವ ಕುತೂಹಲ ಇದೆ. ತಂಡದಲ್ಲಿ ಸ್ಥಾನ ಪಡೆಯುವ ಮೂರನೇ ಸ್ಪಿನ್ನರ್ ಯಾರು, 5ನೇ ಕ್ರಮಾಂಕದಲ್ಲಿ ಯಾರಾಡುತ್ತಾರೆ ಎನ್ನುವ ಬಗ್ಗೆ ಮಾತ್ರ ಕೆಎಲ್ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಇನ್ನೂ ಭಾರತ ತಂಡದ ಪ್ಲೇಯಿಂಗ್ XI ಅನ್ನು ನಿರ್ಧರಿಸಿಲ್ಲ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ. ತಂಡದ ಆಯ್ಕೆ ಬಗ್ಗೆ ಇನ್ನೂ ಸಾಕಷ್ಟು ಚರ್ಚೆ ನಡೆಯುತ್ತಿದೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಡಲು ಸಿದ್ದ
ಶುಭಮನ್ ಗಿಲ್ ತಂಡದಲ್ಲಿ ಇರುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅವರು ಇನ್ನೂ ಆಡುವ ಬಳಗವನ್ನು ನಿರ್ಣಯಿಸಿಲ್ಲ ಎಂದು ಹೇಳಿದ್ದಾರೆ.
ಮೊದಲನೇ ಟೆಸ್ಟ್ ಆರಂಭಕ್ಕೆ ಮುನ್ನವೇ ಕೆಎಲ್ ರಾಹುಲ್ ಯಾವುದೇ ಕ್ರಮಾಂಕದಲ್ಲಿಯಾದರೂ ಆಡಲು ಸಿದ್ಧ ಎಂದು ಹೇಳಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರೆ ತಾನು 4 ಅಥವಾ 5ನೇ ಕ್ರಮಾಂಕದಲ್ಲಿ ಆಡುತ್ತೇನೆ ಎಂದು ಅವರು ಹೇಳಿದರು.
ಮಧ್ಯಮ ಕ್ರಮಾಂಕದಲ್ಲಿ ಆಡಲು ನಾನು ತುಂಬಾ ಸಂತೋಷಪಡುತ್ತೇನೆ. ಯಾವ ಕ್ರಮಾಂಕದಲ್ಲಿ ಆಡಬೇಕೆಂದು ತಂಡ ನಿರ್ಣಯಿಸಿದರೆ ಆ ಕ್ರಮಾಂಕದಲ್ಲಿ ಆಡುತ್ತೇನೆ ಎಂದು ಹೇಳಿದರು.

ಪಿಚ್ ಬಗ್ಗೆ ಈಗಲೇ ನಿರ್ಧರಿಸಲಾಗದು
"ವಿಸಿಎ ಪಿಚ್ ಮೊದಲನೇ ದಿನದಿಂದಲೇ ಸ್ಪಿನ್ನರ್ ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಮಾಡಿದ್ದೇವೆ. ನಾವು ಪಿಚ್ ಅನ್ನು ಪರಿಶೀಲನೆ ಮಾಡಿದ್ದೇವೆ, ಆದರೆ ಅದು ಹೇಗೆ ವರ್ತಿಸಲಿದೆ ಎನ್ನುವುದನ್ನು ಈಗಲೇ ಸರಿಯಾಗಿ ಹೇಳಲಾಗದು" ಎಂದು ಅವರು ಹೇಳಿದರು.
ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದನ್ನು ಪಂದ್ಯದ ಮೊದಲ ದಿನವಷ್ಟೇ ತಿಳಿಯಲು ಸಾಧ್ಯ ಎಂದು ರಾಹುಲ್ ಹೇಳಿದರು. ಉತ್ತಮ ಪ್ರದರ್ಶನ ನೀಡಿರುವ ಆಟಗಾರರಿದ್ದಾರೆ. ಇನ್ನೂ ಮೂರು ಸ್ಥಾನಗಳಿಗೆ ಯಾರನ್ನು ಆಯ್ಕೆ ಮಾಡಿಲ್ಲ, ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದರು. ಮೂವರು ಸ್ಪಿನ್ನರ್ ಗಳೊಂದಿಗೆ ಆಡುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ, ಆಟದ ಹಿಂದಿನ ದಿನ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಮೊದಲ ಪಂದ್ಯಕ್ಕಾಗಿ ಸಿದ್ಧವಾಗಿದ್ದೇವೆ
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವುದು ಯಾವಾಗಲೂ ಖುಷಿ ನೀಡುತ್ತದೆ. ಕಳೆದ ಒಂದು ವಾರದಿಂದ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲಾ ರೀತಿಯ ಸವಾಲನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಕೆಎಲ್ ರಾಹುಲ್ ಹೇಳಿದರು.
ತಂಡದಲ್ಲಿ ಎಲ್ಲರಿಗೂ ತಮ್ಮ ಪಾತ್ರದ ಬಗ್ಗೆ ಅರಿವು ಇದೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಯ್ಕೆಯಾಗಲಿಲ್ಲ ಎಂದರೆ ಅವರು ಯಾಕೆ ಆಡುತ್ತಿಲ್ಲ ಎನ್ನುವುದು ತಿಳಿದಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications