Ind Vs Aus 1st Test: ನಾಗ್ಪುರ ಪಿಚ್ ವರದಿ ಬಹಿರಂಗ: ಆಸ್ಟ್ರೇಲಿಯಾಗೆ ಕಾದಿದೆ ಆಘಾತ!

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ.
5 ದಿನಗಳ ಕಾಲ ಬೆಂಗಳೂರಿನಲ್ಲಿ ಕಠಿಣ ಅಭ್ಯಾಸ ಮಾಡಿದ ನಂತರ ಆಸ್ಟ್ರೇಲಿಯಾ ತಂಡ ನಾಗ್ಪುರಕ್ಕೆ ಪ್ರಯಾಣ ಮಾಡಿದೆ. ಮಂಗಳವಾರ ಆಸ್ಟ್ರೇಲಿಯಾ ಆಟಗಾರರು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಕ್ರೀಡಾಂಗಣದಲ್ಲಿ ಪಿಚ್ ಪರಿಶೀಲನೆ ನಡೆಸಿದರು.
ಮೊದಲನೇ ಟೆಸ್ಟ್ ಪಂದ್ಯದ ಪಿಚ್ ಹೇಗಿರಲಿದೆ ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಸ್ಪಿನ್‌ಗೆ ಸಹಕಾರಿಯಾಗುವ ಪಿಚ್‌ನಲ್ಲಿ ಆಡಲು ಭಾರತ ತಂಡ ಸಿದ್ಧವಾಗಿದೆ. ನಾಗ್ಪುರ ಪಿಚ್ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡಲಿದೆ.
ಮೂಲಗಳ ಪ್ರಕಾರ ಪಂದ್ಯದ ಮೊದಲನೇ ದಿನದಿಂದಲೇ ಚೆಂಡು ತಿರುಗಲು ಶುರು ಮಾಡುತ್ತದೆ. ಮೊದಲನೇ ದಿನದಿಂದಲೇ ಇಲ್ಲಿ ಸ್ಪಿನ್ನರ್ ಗಳು ಮಿಂಚುವ ಅವಕಾಶ ಪಡೆದಿರುತ್ತಾರೆ ಎಂದು ಹೇಳಲಾಗಿದೆ.
ಈಗಾಗಲೇ ಆಸ್ಟ್ರೇಲಿಯಾ ತಂಡ ಪಿಚ್ ವಿಚಾರದಲ್ಲಿ ಕ್ಯಾತೆ ಮಾಡಿದೆ. ಪಂದ್ಯಕ್ಕೆ ಮುನ್ನವೇ ಭಾರತ ತಂಡ ತನಗೆ ಅನುಕೂಲಕರ ಪಿಚ್ ನಿರ್ಮಿಸಿಕೊಳ್ಳುತ್ತದೆ ಎಂದು ಮಾಜಿ ಆಸ್ಟ್ರೇಲಿಯಾ ಆಟಗಾರರು ದೂರಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಟೀಂ ಇಂಡಿಯಾ ತವರಿನ ಪರಿಸ್ಥಿತಿಯ ಲಾಭ ಪಡೆಯಲು ನಿರ್ಧರಿಸಿದೆ.

ಸ್ಪಿನ್ನರ್‌ಗಳು ಭಾರತದ ಪ್ರಮುಖ ಅಸ್ತ್ರ
"ನಮಗೆ ತವರಿನ ಪರಿಸ್ಥಿತಿಯ ಲಾಭವಾಗುವಂತೆ ಪಿಚ್‌ಗಳನ್ನು ತಯಾರಿಸಲು ಬಯಸುತ್ತೇವೆ. ಸ್ಪಿನ್ನರ್‌ಗಳು ತಂಡದ ಪ್ರಮುಖ ಅಸ್ತ್ರ, ಅವರಿಗೆ ಸಹಾಯಕವಾಗುವಂತೆ ಬೌಲಿಂಗ್ ಮಾಡಲು ಮತ್ತು ವಿಕೆಟ್ ಪಡೆಯಲು ಉತ್ತಮ ಪಿಚ್‌ಗಳನ್ನು ನಿರ್ಮಿಸಬೇಕು" ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಸ್ಪಿನ್‌ಗೆ ನೆರವಾಗುವ ಪಿಚ್ ನಿರ್ಮಿಸಲು ಕೇಳಲಾಗಿದೆ. ಸ್ಪಿನ್ ಪಿಚ್‌ಗಳೇ ಭಾರತ ತಂಡದ ವೈಶಿಷ್ಟ್ಯವಾಗಿದೆ. ಸೋಮವಾರ ಪಿಚ್‌ನಲ್ಲಿ ಹಸಿರು ಹೊದಿಕೆ ಇತ್ತು, ಆದರೆ ಕಂದು ಬಣ್ಣದ ಪ್ಯಾಚ್‌ಗಳಿದ್ದವು.
ಗುರುವಾರ ಮೊದಲನೇ ಪಂದ್ಯದ ಆರಂಭದ ವೇಳೆಗೆ ಹುಲ್ಲು ಸಂಪೂರ್ಣವಾಗಿ ಬೋಳಾಗುವ ಸಾಧ್ಯತೆ ಇದ್ದು. ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗಲಿದೆ.

ನಾಲ್ಕು ಸ್ಪಿನ್ನರ್ ಗಳ ಜೊತೆ ಆಡುತ್ತಾ ಭಾರತ?
ಸ್ಪಿನ್ ಸ್ನೇಹಿ ಪಿಚ್ ಆಗಿರುವುದರಿಂದ ಭಾರತ ನಾಲ್ವರು ಸ್ಪಿನ್ನರ್ ಗಳ ಜೊತೆ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ತಂಡದಲ್ಲಿರುವ ಸ್ಪಿನ್ನರ್ ಗಳಾಗಿದ್ದಾರೆ.
ಒಂದು ವೇಳೆ ಪಿಚ್ ಮೊದಲನೇ ದಿನದಿಂದಲೇ ಸ್ಪಿನ್‌ಗೆ ನೆರವು ನೀಡಿದರೆ ಈ ನಾಲ್ವರು ಆಡುವುದು ಖಚಿತವಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಇದು ಮಾರಕವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸ್ಪಿನ್ನರ್ ಗಳ ಪಾತ್ರ ಏನು ಎನ್ನುವುದು ಈಗಾಗಲೇ ಆಸ್ಟ್ರೇಲಿಯಾ ತಂಡದ ಅನುಭವಕ್ಕೆ ಬಂದಿದೆ.
ಭಾರತ ತವರಿನಲ್ಲಿ ಆಡಿರುವ ಕೊನೆಯ 34 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ವೇಳೆ ಯಾವುದೇ ಸರಣಿಯನ್ನು ಸೋತಿಲ್ಲ.

ಭಾರತ ತಂಡಕ್ಕೆ ರವಿಶಾಸ್ತ್ರಿ ಸಲಹೆ
ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಪಿಚ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತದೆ. ಆಸ್ಟ್ರೇಲಿಯಾ ಈಗಾಗಲೇ ಹಲವು ಬಾರಿ ಭಾರತ ತಂಡದ ಮಾನಸಿಕ ಬಲ ಕುಗ್ಗುವಂತೆ ಮಾಡಲು ಪ್ರಯತ್ನ ಆರಂಭಿಸಿದೆ. ತವರಿನ ಪರಿಸ್ಥಿಯ ಲಾಭವನ್ನು ಭಾರತ ತಂಡ ಪಡೆಯಬೇಕು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಸಲಹೆ ನೀಡಿದ್ದಾರೆ.
ನಾಗ್ಪುರ ಕೆಂಪು ಮಣ್ಣಿನ ಪಿಚ್ ಹೊಂದಿದೆ, ಸಾಮಾನ್ಯವಾಗಿ ಈ ಪಿಚ್ ಮೂರನೇ ದಿನದ ಬಳಿಕ ಸ್ಪಿನ್ನರ್‍ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಆದರೆ, ತಂಡದ ಮನವಿಯ ಮೇರೆಗೆ ಮೊದಲನೇ ದಿನದಿಂದಲೇ ಚೆಂಡು ತಿರುಗುವಂತೆ ಪಿಚ್ ಸಿದ್ಧಪಡಿಸಲಾಗಿದೆ.
2015ರಲ್ಲಿ ನಾಗ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಎಲ್ಲಾ 20 ವಿಕೆಟ್‌ಗಳನ್ನು ಸ್ಪಿನ್ನರ್ ಗಳು ಪಡೆದಿದ್ದರು. 2017 ರಲ್ಲಿ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಮತ್ತು ರವೀಂದ್ರ 5 ವಿಕೆಟ್ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications