Ind vs Aus 1st Test: ಆಸ್ಟ್ರೇಲಿಯಾ ವಿರುದ್ಧ ಶತಕದ ಜೊತೆಗೆ ಐತಿಹಾಸಿಕ ದಾಖಲೆ ಬರೆದ ರೋಹಿತ್ ಶರ್ಮಾ

ನಾಗ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಪರವಾಗಿ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಸ್ವತಃ ನಾಯಕ ರೋಹಿತ್ ಶರ್ಮಾ ಆಸರೆಯಾಗಿದ್ದು ಭರ್ಜರಿ ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿರುವ 9ನೇ ಶತಕ ಇದಾಗಿದೆ.
ನಾಗ್ಪುರದ ಸವಾಲಿನ ಪಿಚ್‌ನಲ್ಲಿ ಇತರ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ತಡಕಾಡುತ್ತಿದ್ದರೆ ರೋಹಿತ್ ಶರ್ಮಾ ಸರಾಗವಾಗಿ ಬ್ಯಾಟಿಂಗ್ ಮಾಡುವ ಮೂಲಕ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡುತ್ತಾ ಇನ್ನಿಂಗ್ಟ್ ಕಟ್ಟಿದ ರೋಹಿತ್ ತಂಡದ ಉತ್ತಮ ಸ್ಥಿತಿಗೆ ಕಾರಣವಾಗಿದ್ದಾರೆ. ಈ ಶತಕದೊಂದಿಗೆ ರೋಹಿತ್ ಶರ್ಮಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು ವಿಶ್ವ ಕ್ರಿಕೆಟ್‌ನಲ್ಲಿ ಈವರೆಗೆ ಯಾರಿಂದಲೂ ಮಾಡಲು ಸಾಧ್ಯವಾಗದ ಶ್ರೇಷ್ಠ ದಾಖಲೆಯೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿಗೆ ಬಂದಿದೆ. ಆ ಅಪರೂಪದ ದಾಖಲೆ ಯಾವುದು? ಮುಂದೆ ಓದಿ..

ಮೂರು ಮಾದರಿಯಲ್ಲೂ ನಾಯಕನಾಗಿ ಶತಕ
ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ನಾಯಕನಾಗಿ ಮೂರು ಮಾದರಿಯಲ್ಲಿಯೂ ಶತಕ ಸಿಡಿಸಿದ ಪ್ರಪ್ರಥಮ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಸಾಧನೆಯನ್ನು ಈ ಹಿಂದೆ ಯಾರಿಂದಲೂ ಮಾಡಲು ಸಾಧ್ಯವಾಗಿರಲಿಲ್ಲ. ಈ ಮೂಲಕ ಕ್ರಿಕೆಟ್ ಇತಿಹಾಸದ ವಿಶೇಷ ದಾಖಲೆಯೊಂದನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ನಾಯಕನಾಗಿ ಏಕದಿನ ಹಾಗೂ ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ಇದೀಗ ಟೆಸ್ಟ್ ಮಾದರಿಯಲ್ಲಿಯೂ ಆ ಸಾಧನೆ ಮಾಡುವ ಮೂಲಕ ಈ ದಾಖಲೆಗೆ ಪಾತ್ರರಾಗಿದ್ದಾರೆ.

ನಾಯಕನಾಗಿ ರೋಹಿತ್ ಶರ್ಮಾ ಶತಕಗಳು
ಟೀಮ್ ಇಂಡಿಯಾದ ಎಲ್ಲಾ ಮಾದರಿಯ ನಾಯಕನಾಗಿ 2022ರ ಆರಂಭದಲ್ಲಿ ಚುಕ್ಕಾಣಿ ವಹಿಸಿಕೊಂಡರು. ಆದರೆ ಅದಕ್ಕೂ ಮುನ್ನ ನಾಯಕನಾಗಿದ್ದ ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದಾಗ ಅದ್ಭುತವಾಗಿ ಪ್ರದರ್ಶನ ನೀಡಿದ್ದರು. 2018ರ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧ ಏಕದಿನ ಶತಕವನ್ನು ಸಿಡಿಸಿದ್ದರು. ಇನ್ನು ಟಿ20 ಮಾದರಿಯಲ್ಲಿ ಅದಕ್ಕೂ ಮುನ್ನ ಅಂದರೆ 2017ರಲ್ಲಿ ಶ್ರೀಲಂಕಾ ವಿರುದ್ಧ ನಾಯಕನಾಗಿ ಶತಕ ಸಿಡಿಸಿದ್ದರು.

ಉಳಿದ ದಾಂಡಿಗರ ಪರದಾಟ
ಇನ್ನು ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಂದು ತುದಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದರೂ ಮತ್ತೊಂದು ಭಾಗದಲ್ಲಿ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಹರಸಾಹಸ ಪಡುತ್ತಿದ್ದಾರೆ. ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಸೂರ್ಯಕುಮಾರ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಶುಬ್ಮನ್ ಗಿಲ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಉಮೇಶ್ ಯಾದವ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್
ಬೆಂಚ್: ಟ್ರಾವಿಸ್ ಹೆಡ್, ಮಿಚೆಲ್ ಸ್ವೆಪ್ಸನ್, ಆಷ್ಟನ್ ಅಗರ್, ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಲ್ಯಾನ್ಸ್ ಮೋರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications