
ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಎಂದರೆ ಅಲ್ಲಿ ಆಟಗಾರರು ಮಾತ್ರ ಪರಸ್ಪರ ಕಾಲೆಳೆದುಕೊಳ್ಳುವುದಿಲ್ಲ, ಮಾಜಿ ಕ್ರಿಕೆಟಿಗರು ಕೂಡ ವಾಕ್ಸಮರದಲ್ಲಿ ಭಾಗಿಯಾಗುತ್ತಾರೆ. ಇಂತಹದ್ದೇ ಸಂದರ್ಭದಲ್ಲಿ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಆಸ್ಟ್ರೇಲಿಯಾದ ಮಾರ್ಕ್ ವಾರನ್ನು ಟ್ರೋಲ್ ಮಾಡಿದ್ದಾರೆ.
2020-2021ರಲ್ಲಿ ಆಸ್ಟ್ರೇಲಿಯಾಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಪ್ರವಾಸ ಮಾಡಿದ ಭಾರತ ತಂಡಕ್ಕೆ ರವಿಶಾಸ್ತ್ರಿ ಕೋಚ್ ಆಗಿದ್ದರು. ಈ ಸರಣಿಯಲ್ಲಿ ಭಾರತ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು.
ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ಮೊದಲನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲನೇ ಟೆಸ್ಟ್ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದರು, ಪ್ರಮುಖ ಆಟಗಾರರು ಗಾಯಗೊಂಡು ಗೈರು ಹಾಜರಾಗಿದ್ದು ಭಾರತ ಗೆಲ್ಲುವ ಯಾವುದೇ ವಿಶ್ವಾಸ ಇರಲಿಲ್ಲ.
ಆದರೆ ಭಾರತ ನಂತರ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ 2-1ರಿಂದ ಸರಣಿಯನ್ನು ಗೆದ್ದುಕೊಂಡಿತು. ಬ್ರಿಸ್ಬೇನ್‌ನ ಗಬ್ಬಾದಲ್ಲಿ ವಿಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಮಾರ್ಕ್ ವಾ ಕಾಲೆಳೆದ ರವಿಶಾಸ್ತ್ರಿ
ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಆಸ್ಟ್ರೇಲಿಯಾದ ಮಾರ್ಕ್ ವಾರನ್ನು ಕಾಲೆಳೆದಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲನೇ ದಿನ ಕಾಮೆಂಟೇಟರ್ ಗಳಾದ ದಿನೇಶ್ ಕಾರ್ತಿಕ್ ಮತ್ತು ಮಾರ್ಕ್ ವಾ ನಡುವೆ ಚರ್ಚೆ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಮಾರ್ಕ್ ವಾ ಈ ಬಾರಿಯ ಟೆಸ್ಟ್ ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿಯಲು ಮುಂದಾದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರವಿಶಾಸ್ತ್ರಿ ಮಾರ್ಕ್ ವಾ ಭವಿಷ್ಯ ನುಡಿಯುವುದು ಭಾರತಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾರ್ಕ್ ವಾ ನಾನೊಬ್ಬನೇ ಅದನ್ನು ಹೇಳಿರಲಿಲ್ಲ ಎಂದರು.
ಕಳೆದ ಬಾರಿಯ ಸರಣಿಯ ಮೊದಲನೇ ಟೆಸ್ಟ್‌ನಲ್ಲಿ ಭಾರತ 36 ರನ್‌ಗಳಿಗೆ ಆಲೌಟ್ ಆದ ಸಂದರ್ಭದಲ್ಲಿ ಮಾರ್ಕ್ ವಾ, ಆಸ್ಟ್ರೇಲಿಯಾ 4-0 ಅಂತರದಲ್ಲಿ ಸರಣಿ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತ್ತು.
ಮಾರ್ಕ್ ವಾ ಕಳೆದ ಬಾರಿ ನುಡಿದಿದ್ದ ಭವಿಷ್ಯದ ಬಗ್ಗೆ ನೆನಪಿಸಿದ ರವಿಶಾಸ್ತ್ರಿ ಅವರ ಕಾಲೆಳೆದರು. ನೀವು ಉತ್ತಮವಾಗಿ ಭವಿಷ್ಯ ನುಡಿಯುತ್ತೀರಿ ಈ ಬಾರಿಯೂ ಆಸ್ಟ್ರೇಲಿಯಾ ಸರಣಿ ಗೆಲ್ಲುತ್ತದೆ ಎಂದು ನಿರೀಕ್ಷೆ ಮಾಡಿದರೆ, ಭಾರತಕ್ಕೆ ಅನುಕೂಲ ಎಂದರು.

ಮೊದಲನೇ ದಿನ ಭಾರತಕ್ಕೆ ಮೇಲುಗೈ
ನಾಗ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 177 ರನ್‌ಗಳಿಗೆ ಆಲೌಟ್ ಆಗಿದೆ, ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ.