Ind Vs Aus 1st Test: ಭಾರತದಿಂದ ಪಂದ್ಯವನ್ನು ಕಸಿದುಕೊಳ್ಳಬಹುದಾದ ಮೂವರು ಆಟಗಾರರು ಇವರು!

ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕೆ ಕೆಲವೇ ಗಂಟೆಗಳು ಉಳಿದಿವೆ. ನಾಗ್ಪುರದಲ್ಲಿ ಮೊದಲನೇ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿವೆ.
ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತನ್ನ ಪ್ರತಿಷ್ಟೆಯನ್ನು ಉಳಿಸಿಕೊಳ್ಳಲು ಸರಣಿಯನ್ನು ಗೆಲ್ಲಲೇಬೇಕೆನ್ನುವ ಹಠದಲ್ಲಿದೆ. ಕಳೆದ ಬಾರಿ ಆಸ್ಟ್ರೇಲಿಯಾದಲ್ಲೇ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆದ್ದಿರುವ ಭಾರತ ತಂಡಕ್ಕೆ, ಈ ಬಾರಿ ತವರಿನಲ್ಲಿ ಸರಣಿ ಗೆಲ್ಲುವ ತವಕ.
ಭಾರತ ಈ ಸರಣಿಯಲ್ಲಿ ಗೆದ್ದರೆ, ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಜೊತೆಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುತ್ತದೆ. ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಡೇವಿಡ್ ವಾರ್ನರ್, ಉಸ್ಮಾನ್ ಖವಾಜರಂತಹ ಪ್ರಮುಖ ಆಟಗಾರರ ವಿರುದ್ಧ ಟೀಂ ಇಂಡಿಯಾ ಈಗಾಗಲೇ ರಣತಂತ್ರ ರೂಪಿಸಿದೆ.
ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್‌ರಂತಹ ಬೌಲಿಂಗ್ ಪಡೆ ವಿರುದ್ಧ ಆಡಲು ಭಾರತದ ಬ್ಯಾಟರ್ ಗಳು ಕಠಿಣ ಅಭ್ಯಾಸ ಮಾಡಿದ್ದಾರೆ. ದೊಡ್ಡ ಹೆಸರು ಮಾಡದ ಆದರೆ ಪ್ರತಿಭಾವಂತ ಆಟಗಾರರು ಆಸ್ಟ್ರೇಲಿಯಾ ತಂಡದಲ್ಲಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತಕ್ಕೆ ತಲೆನೋವಾಗಬಹುದಾದ ಮೂವರು ಆಟಗಾರರು ಇವರು.

ಆಷ್ಟನ್ ಅಗರ್ ಸ್ಪಿನ್ ಅಸ್ತ್ರ
ಆಸ್ಟ್ರೇಲಿಯಾ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಆಷ್ಟನ್ ಅಗರ್ ಭಾರತದ ಬ್ಯಾಟಿಂಗ್ ಪಡೆಗೆ ಮಾರಕವಾಗುವ ಸಾಧ್ಯತೆ ಇದೆ. ಅವರು ಇದುವರೆಗೂ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 52 ಸರಾಸರಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ದಾರೆ. ಅವರ ಅಂಕಿ ಅಂಶಗಳು ಉತ್ತಮವಾಗಿಲ್ಲವಾದರೂ, ಭಾರತದ ಸ್ಪಿನ್ ಪಿಚ್‌ನಲ್ಲಿ ಅವರು ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಕಳೆದ ಬಾರಿ ಭಾರತದಲ್ಲಿ ಸರಣಿ ನಡೆದಾಗ ಸ್ಪಿನ್ನರ್ ಸ್ಟೀವ್ ಓ'ಕೀಫ್ ಭಾರತವನ್ನು ಕಾಡಿದ್ದು ಇನ್ನೂ ನೆನಪಿದೆ. ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟರ್ ಗಳು ಸ್ಪಿನ್ ವಿರುದ್ಧ ಆಡಲು ವಿಫಲವಾಗುತ್ತಿರುವುದು ಆಸ್ಟ್ರೇಲಿಯಾ ಪಡೆಗೂ ತಿಳಿದಿದೆ. ಆಸ್ಟ್ರೇಲಿಯಾ ತಂಡ ಅಷ್ಟನ್ ಅಗರ್ ಮತ್ತು ಟಾಡ್ ಮರ್ಫಿಯ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅಗರ್ ಮೊದಲನೇ ಆಯ್ಕೆಯಾಗುವ ಸಾಧ್ಯತೆ ಇದೆ.

ಉತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅವರು ಪ್ರಮುಖ ಬ್ಯಾಟರ್ ಆಗಿದ್ದಾರೆ. 2022ರಲ್ಲಿ ಅವರು 50.38 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಸ್ಪಿನ್ ವಿರುದ್ಧ ಆಡುವ ಸಾಮರ್ಥ್ಯವನ್ನು ಹೊಂದಿರುವ ಟ್ರಾವಿಸ್ ಹೆಡ್, ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ವಿರುದ್ಧ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ತಂಡ ಸ್ಮಿತ್ ಮತ್ತು ಲ್ಯಾಬುಸ್‌ಚಾಗ್ನೆ ವಿರುದ್ಧ ರಣತಂತ್ರ ರೂಪಿಸಿದ್ದು, ಟ್ರಾವಿಸ್ ಹೆಡ್ ಭಾರತಕ್ಕೆ ತಲೆನೋವಾಗುವ ಸಾಮರ್ಥ್ಯ ಹೊಂದಿದ್ದಾರೆ.

ಸ್ಪಿನ್‌ಗೆ ಆಡುವ ಅಲೆಕ್ಸ್ ಕ್ಯಾರಿ
ಅಲೆಕ್ಸ್ ಕ್ಯಾರಿ ಸದ್ಯ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಕೀಪರ್ ಆಗಿದ್ದಾರೆ. ಅವರು ಇದುವರೆಗೂ ಕೇವಲ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದರು, ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
15 ಪಂದ್ಯಗಳಿಂದ 39.56 ಸರಾಸರಿಯಲ್ಲಿ 633 ರನ್ ಗಳಿಸಿದ್ದಾರೆ. ಆದರೆ, ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿರುವುದು ಭಾರತದ ವಿರುದ್ಧದ ಸರಣಿಯಲ್ಲಿ ಅವರನ್ನು ಪ್ರಮುಖ ಆಟಗಾರರನ್ನಾಗಿ ಮಾಡಬಹುದಾಗಿದೆ.
ಉತ್ತಮವಾಗಿ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಆಡುವ ಕ್ಯಾರಿ ಭಾರತದ ಸ್ಪಿನ್ ಬೌಲಿಂಗ್ ವಿರುದ್ಧ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ದೊಡ್ಡ ಹೆಸರುಳ್ಳ ಆಟಗಾರರ ಜೊತೆಗೆ ಭಾರತಕ್ಕೆ ಅಪಾಯಕಾರಿಯಾಗಬಹುದಾದದ ಈ ಆಟಗಾರರನ್ನು ಹೇಗೆ ಕಟ್ಟಿಹಾಕಬೇಕು ಎನ್ನುವುದರತ್ತ ಕೂಡ ಗಮನ ಹರಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications