
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಆಟಗಾರರು ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದರು.
ಮಿಸ್ಟರ್ 360 ಬ್ಯಾಟರ್ ಸೂರ್ಯಕುಮಾರ್ ಯಾದವ್ ಸಾಕಷಟು ಕಾಯುವಿಕೆಯ ನಂತರ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಒಂದೂವರೆ ವರ್ಷಗಳ ನಂತರ ಮೊದಲ ಬಾರಿಗೆ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆದು, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಕೆಎಸ್ ಭರತ್ ಒಂದೂವರೆ ವರ್ಷದಿಂದ ಭಾರತ ಟೆಸ್ಟ್ ತಂಡದಲ್ಲಿ ಇದ್ದರೂ, ರಿಷಬ್ ಪಂತ್ ಆಡುತ್ತಿದ್ದ ಕಾರಣ ಬೆಂಚ್ ಕಾಯುವುದಕ್ಕಷ್ಟೇ ಸೀಮಿತವಾಗಿದ್ದರೆ. ಆದರೆ, ರಿಷಬ್ ಪಂತ್ ಅಪಘಾತದಲ್ಲಿ ಗಾಯಗೊಂಡು ಸರಣಿಯಿಂದ ಹೊರಗುಳಿದ ನಂತರ ಕೆಎಸ್ ಭರತ್‌ಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಆಸ್ಟ್ರೇಲಿಯಾ ಟೆಸ್ಟ್ ಆರಂಭಕ್ಕೆ ಮುನ್ನ ಮಾಜಿ ಕೋಚ್ ರವಿಶಾಸ್ತ್ರಿ ಇಬ್ಬರು ಆಟಗಾರರಿಗೆ ಚೊಚ್ಚಲ ಟೆಸ್ಟ್ ಕ್ಯಾಪ್‌ಗಳನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಹೆಮ್ಮೆಯ ಮಗನಿಗೆ ಅಮ್ಮನ ಅಪ್ಪುಗೆ
ಆಂಧ್ರಪ್ರದೇಶದ 29 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಅಂತಿಮವಾಗಿ ಭಾರತ ಪ್ಲೇಯಿಂಗ್ XIನಲ್ಲಿ ಅವಕಾಶ ಪಡೆದುಕೊಂಡರು. ಮಗನ ಸಾಧನೆಯ ಕ್ಷಣವನ್ನು ಕೆಎಸ್ ಭರತ್ ಕುಟುಂಬಸ್ಥರು ಮೈದಾನದಲ್ಲಿ ಹಾಜರಿದ್ದು ಕಣ್ತುಂಬಿಕೊಂಡರು.
ಕೆಎಸ್ ಭರತ್ ಚೊಚ್ಚಲ ಕ್ಯಾಪ್ ಪಡೆದ ನಂತರ ಅಮ್ಮನ ಅಪ್ಪುಗೆಯ ಆಶೀರ್ವಾದ ಪಡೆದುಕೊಂಡರು. ಅಮ್ಮನ ಕೆನ್ನೆಗೆ ಮುತ್ತು ನೀಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಈ ಫೋಟೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
87 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕೆಎಸ್ ಭರತ್ 4707 ರನ್ ಗಳಿಸಿದ್ದಾರೆ. 305ನೇ ಆಟಗಾರನಾಗಿ ಅವರು ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಕೆಎಸ್ ಭರತ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ.

ಮೊದಲನೇ ಪಂದ್ಯದಲ್ಲೇ ಮಿಂಚು
ಆಡಿದ ಮೊದಲನೇ ಪಂದ್ಯದಲ್ಲಿ ಭರತ್ ಮಿಂಚು ಹರಿಸಿದರು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೆಎಸ್ ಭರತ್ ರಿಷಬ್ ಪಂತ್ ಸ್ಥಾನವನ್ನು ತುಂಬುತ್ತಾರೆಯೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.