Ind vs Aus 2nd Test: ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ ನಾಥನ್ ಲಿಯಾನ್

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನಾಥನ್ ಲಿಯಾನ್ ಅಪರೂಪದ ಸಾಧನೆ ಮಾಡಿದರು. ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.
ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ 3ನೇ ಬೌಲರ್ ಮತ್ತು ಆಸ್ಟ್ರೇಲಿಯಾದ ಮೊದಲನೇ ಬೌಲರ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಭಾರತದ ವಿರುದ್ಧ 66 ಟೆಸ್ಟ್ ಪಂದ್ಯಗಳನ್ನಾಡಿರುವ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ 139 ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾರತದ ವಿರುದ್ಧ ಆಡಿರುವ 32 ಟೆಸ್ಟ್ ಪಂದ್ಯಗಳಿಂದ 105 ವಿಕೆಟ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಈಗ 43 ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದು ನಾಥನ್ ಲಿಯಾನ್ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಖಾನ್ ಭಾರತದ ವಿರುದ್ಧದ 38 ಟೆಸ್ಟ್ ಪಂದ್ಯಗಳಲ್ಲಿ 94 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್‌ನ ಮಾಲ್ಕೊಮ್ ಮಾರ್ಷಲ್ 30 ಪಂದ್ಯಗಳಲ್ಲಿ 76 ವಿಕೆಟ್ ಪಡೆದ 5ನೇ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ಆಘಾತ ನೀಡಿದ ಲಿಯಾನ್
ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಲ್ಲಿ ಆಸ್ಟ್ರೇಲಿಯಾ ಸದ್ಯಕ್ಕೆ ಮೇಲುಗೈ ಸಾಧಿಸಿದೆ. ನಾಥನ್ ಲಿಯಾನ್ ಪ್ರಮುಖ 5 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು.
ಭಾರತದ ನಾಲ್ವರು ಅಗ್ರ ಆಟಗಾರರ ವಿಕೆಟ್ ಪಡೆಯುವ ಮೂಲಕ ಮಿಂಚಿದ್ದ ನಾಥನ್ ಲಿಯಾನ್ ನಂತರ ಕೆಎಸ್ ಭರತ್ ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವ ಮೂಲ ನಿರಾಸೆ ಅನುಭವಿಸಿದರು. 44 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿಯನ್ನು ಪದಾರ್ಪಣಾ ಪಂದ್ಯವನ್ನಾಡುತ್ತಿರುವ ಮ್ಯಾಥ್ಯೂ ಕುಹ್ನೆಮನ್ ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು.

ಆಸ್ಟ್ರೇಲಿಯಾದ ಪ್ರಮುಖ ಅಸ್ತ್ರ
ನಾಥನ್ ಲಿಯಾನ್ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿದ್ದಾರೆ. ಇದುವರೆಗೂ 117 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 31.61 ಸರಾಸರಿಯಲ್ಲಿ 466 ವಿಕೆಟ್ ಪಡೆದುಕೊಂಡಿದ್ದಾರೆ. ಹಲವು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 22 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದು, 3 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications