Ind vs Aus 2nd Test: ಜಡೇಜಾ ಮೋಡಿಗೆ ಕಂಗಾಲಾದ ಆಸ್ಟ್ರೇಲಿಯಾ: ಭಾರತಕ್ಕೆ 115 ರನ್‌ಗಳ ಗುರಿ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ದೊಡ್ಡ ಮೊತ್ತವನ್ನು ಕಲೆಹಾಕುವ ಕನಸು ಕಾಣುತ್ತಿದ್ದ ಆಸ್ಟ್ರೇಲಿಯಾ ಪಡೆಗೆ ರವೀಂದ್ರ ಜಡೇಜಾ ಅಡ್ಡಿಯಾದರು. ಜಡೇಜಾ, ಅಶ್ವಿನ್ ಮಾರಕ ದಾಳಿಗೆ ಸಿಕ್ಕ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಆಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 61 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡು ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸಲ್ಲಿದ್ದ ಕಾಂಗರೂ ಪಡೆಗೆ ಮೂರನೇ ದಿನದ ಆರಂಭದ ಮೊದಲ ಓವರ್ ನಲ್ಲೇ ಆಘಾತ ಎದುರಾಯಿತು.
ಎರಡನೇ ದಿನದಾಟದಲ್ಲಿ ಉತ್ತಮವಾಗಿ ರನ್ ಗಳಿಸುವ ಮೂಲಕ ಅಪಾಯಕಾರಿಯಾಗಿ ಕಾಣುತ್ತಿದ್ದ ಟ್ರಾವಿಸ್ ಹೆಡ್‌ರನ್ನು ಮೊದಲ ಓವರ್ ನಲ್ಲೇ ಅಶ್ವಿನ್ ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾದ ಕುಸಿತಕ್ಕೆ ಅಡಿಪಾಯ ಹಾಕಿದರು.
ಆಸ್ಟ್ರೇಲಿಯಾದ ಮುಖ್ಯ ಬ್ಯಾಟರ್ ಸ್ಟೀವ್ ಸ್ಮಿತ್ 9 ರನ್ ಗಳಿಸಿದ್ದಾಗ ಅಶ್ವಿನ್ ಬೌಲಿಂಗ್‌ನಲ್ಲಿ ಸ್ವೀಪ್ ಆಡಲು ಹೋಗಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಇಲ್ಲಿಂದ ಆಸ್ಟ್ರೇಲಿಯಾದ ಪತನ ಆರಂಭವಾಯಿತು.
ನಂತರ ದಾಳಿಗೆ ಇಳಿದ ಜಡೇಜಾ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಬೌಲ್ಡ್ ಮಾಡುವ ಮೂಲಕ ಮತ್ತೆ ಆಘಾತ ನೀಡಿದರು. ಮುಂದಿನ ಓವರ್ ನಲ್ಲೇ ಅಶ್ವಿನ್ ಮ್ಯಾಟ್ ರೆನ್‌ಶಾರನ್ನು ಔಟ್ ಮಾಡಿದರು.

ಜಡೇಜಾ ಮಾರಕ ಬೌಲಿಂಗ್
ಮುಂದಿನ ಓವರ್ ನಲ್ಲೇ ಪೀಟರ್ ಹ್ಯಾಂಡ್ಸ್‌ಕಾಂಬ್ ಮತ್ತು ಪ್ಯಾಟ್ ಕಮ್ಮಿನ್ಸ್‌ರನ್ನು ಔಟ್ ಮಾಡಿದರು. ಮತ್ತೊಬ್ಬ ಪ್ರಮುಖ ಬ್ಯಾಟರ್ ಅಲೆಕ್ಸ್ ಕ್ಯಾರಿ ಕೂಡ ಜಡೇಜಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಲಿಯಾನ್ ಮತ್ತು ಕುಹ್ನೆಮನ್‌ರನ್ನು ಕೂಡ ಬೌಲ್ಡ್ ಮಾಡುವ ಮೂಲಕ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್‌ಗೆ ಜಡೇಜಾ ಅಂತ್ಯ ಹಾಡಿದರು.
ಮೂರನೇ ದಿನ ಆರಂಭದಿಂದ ಜಡೇಜಾ ಮತ್ತು ಅಶ್ವಿನ್ ಇಬ್ಬರೇ ಬೌಲಿಂಗ್ ಮಾಡಿದ್ದು ವಿಶೇಷ. ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗುತ್ತಿದ್ದರಿಂದ ಇವರಿಬ್ಬರನ್ನೇ ಸತತವಾಗಿ ದಾಳಿಗೆ ಇಳಿಸಿದ ನಾಯಕ ರೋಹಿತ್ ಶರ್ಮಾ ಲಾಭ ಪಡೆದುಕೊಂಡರು.
ರವೀಂದ್ರ ಜಡೇಜಾ 12.1 ಓವರ್ ಬೌಲಿಂಗ್ ಮಾಡಿ 42 ರನ್ 7 ವಿಕೆಟ್ ಪಡೆದು ಮಿಂಚಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ಉತ್ತಮ ಸಾಧನೆಯಾಗಿದೆ. ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಪಡೆದು ಜಡೇಜಾಗೆ ಸಾಥ್ ನೀಡಿದರು.

ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ
ಭಾರತ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು 115 ರನ್‌ಗಳನ್ನು ಗಳಿಸಬೇಕಾಗಿದೆ. ಈ ಟೆಸ್ಟ್ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ನಾಗ್ಪುರದಲ್ಲಿ ಮೊದಲನೇ ಟೆಸ್ಟ್ ಕೂಡ ಮೂರೇ ದಿನಕ್ಕೆ ಮುಕ್ತಾಯವಾಗಿತ್ತು. ಎರಡನೇ ಟೆಸ್ಟ್ ಕೂಡ ಮೂರು ದಿನದಲ್ಲೇ ಮುಗಿಯುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications