ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತೀಯರದ್ದೇ ಆಟ: ಕೊಹ್ಲಿ ದ್ವಿಶತಕ, ಅಶ್ವಿನ್ ಮಾರಕ ದಾಖಲೆ!

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಮಾಡುತ್ತಿದೆ. ಮಾರ್ಚ್ 1ರಿಂದ ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ಸರಣಿಯ ಮೂರನೇ ಟೆಸ್ಟ್ ನಡೆಯಲಿದೆ.
ಧರ್ಮಶಾಲಾದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದರೆ, ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣ ಮರುನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಅವಧಿಗೆ ಸರಿಯಾಗಿ ಕೆಲಸ ಮುಗಿಯದ ಕಾರಣ ಅನಿವಾರ್ಯವಾಗಿ ಇಂದೋರ್ ಗೆ ಸ್ಥಳಾಂತರಿಸಲಾಗಿದೆ.
ಇಂದೋರ್ ನ ಹೋಳ್ಕರ್ ಸ್ಟೇಡಿಯಂನ ವಿಶ್ವದ ಚಿಕ್ಕ ಕ್ರೀಡಾಂಗಣಗಳಲ್ಲಿ ಒಂದಾಗಿಗೆ ಬೌಂಡರಿಗಳು ಚಿಕ್ಕದಾಗಿರುವುದರಿಂದ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ. 1990ರಲ್ಲಿ ಸ್ಥಾಪನೆಯಾದ ಕ್ರೀಡಾಂಗಣದಲ್ಲಿ 30 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.
ಭಾರತ ತಂಡ ಇಲ್ಲಿ ಇದುವರೆಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. 2016ರ ಅಕ್ಟೋಬರ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 321 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು. 2019ರಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆದ್ದಿತ್ತು.

ದ್ವಿಶತಕ ಬಾರಿಸಿದ್ದ ವಿರಾಟ್ ಕೊಹ್ಲಿ
2016ರಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 211 ರನ್ ಗಳಿಸುವ ಮೂಲಕ ದ್ವಿಶತಕ ಗಳಿಸಿ ಮಿಂಚಿದ್ದರು. ವಿರಾಟ್ ಕೊಹ್ಲಿಗೆ ಸಾಥ್ ನೀಡಿದ್ದ ಅಜಿಂಕ್ಯ ರಹಾನೆ 188 ರನ್ ಗಳಿಸಿದ್ದರು. ಭಾರತ ಈ ಪಂದ್ಯವನ್ನು 321 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡಿತ್ತು.
ನಂತರ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ಮಯಾಂಕ್ ಅಗರ್ವಾಲ್, 243 ರನ್ ಗಳಿಸಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇನ್ನಿಂಗ್ಸ್ 130 ರನ್‌ಗಳ ಜಯ ಸಾಧಿಸಿತ್ತು.
ಹೋಲ್ಕರ್ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರಹಾನೆ ಹೆಸರಿನಲ್ಲಿದೆ. ಅವರು 2 ಟೆಸ್ಟ್ ಪಂದ್ಯಗಳಿಂದ 148.50 ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ. ಮಯಾಂಕ್ ಅಗರ್ವಾಲ್ 243 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಕೊಹ್ಲಿ 228 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ದಾಖಲೆ
ಸದ್ಯ ಆಸ್ಟ್ರೇಲಿಯಾ ತಂಡವನ್ನು ಕಾಡುತ್ತಿರುವ ರವಿಚಂದ್ರನ್ ಅಶ್ವಿನ್ ಇಂದೋರ್ ಅಂಗಳದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅವರು ಇಲ್ಲಿ ಆಡಿರುವ ಎರಡು ಟೆಸ್ಟ್ ಪಂದ್ಯಗಳಿಂದ ಬರೋಬ್ಬರಿ 18 ವಿಕೆಟ್ ಪಡೆದುಕೊಂಡಿದ್ದಾರೆ. 12.50 ಸರಾಸರಿ ಮತ್ತು 3.14 ಎಕಾನಮಿಯನ್ನು ಹೊಂದಿದ್ದಾರೆ.
ಮೊಹಮ್ಮದ್ ಶಮಿ 2 ಟೆಸ್ಟ್ ಪಂದ್ಯಗಳಿಂದ 7 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರೂ ಮಿಂಚಿದರೆ ದಾಖಲೆ ಮತ್ತಷ್ಟು ಉತ್ತಮವಾಗಲಿದೆ.

ಇನ್ನಿಂಗ್ಸ್‌ನಲ್ಲಿ 557 ರನ್ ಗಳಿಸಿದ್ದ ಭಾರತ
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 557 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದು ಹೋಳ್ಕರ್ ಸ್ಟೇಡಿಯಂನಲ್ಲಿ ದಾಖಲಾದ ತಂಡದ ಗರಿಷ್ಠ ಮೊತ್ತವಾಗಿದೆ. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಕೇವಲ 150 ರನ್‌ಗಳಿಗೆ ಆಲೌಟ್ ಆಗಿದ್ದು ಇಲ್ಲಿ ದಾಖಲಾಗಿರುವ ಕನಿಷ್ಠ ಮೊತ್ತವಾಗಿದೆ.
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ 4ನೇ ವಿಕೆಟ್‌ಗೆ 365 ರನ್‌ಗಳ ಜೊತೆಯಾಟ ಆಡಿರುವುದು ಇಲ್ಲಿ ದಾಖಲಾದ ಅತೊ ದೊಡ್ಡ ಜೊತೆಯಾಟ ಎನಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಬಾಂಗ್ಲಾದೇಶದ ವಿರುದ್ಧ ಮೊದಲನೇ ಇನ್ನಿಂಗ್ಸ್‌ನಲ್ಲಿ ಸಿಡಿಸಿದ 243 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications