
ಇಂದೋರ್ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್ ಗಳ ದೌರ್ಬಲ್ಯದ ಅನಾವರಣವಾಗಿದೆ. ಆಸ್ಟ್ರೇಲಿಯಾ ಹೆಣೆದ ಸ್ಪಿನ್ ಬಲೆಗೆ ಭಾರತದ ಬ್ಯಾಟರ್ ಗಳು ಕಂಗಾಲಾದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲೌಟ್ ಆಗಿದೆ.
ಎಲ್ಲಾ 10 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಸ್ಪಿನ್ನರ್ ಗಳು ಎನ್ನುವುದು ವಿಶೇಷ. ಭಾರತದ ಬ್ಯಾಟಿಂಗ್ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಮಾತನಾಡಿದ್ದಾರೆ. ಭಾರತದ ಕೆಲವು ಆಟಗಾರರು ಉತ್ತಮ ಸ್ಪಿನ್ನರ್‌ಗಳ ವಿರುದ್ಧ ಪರದಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಚೇತೇಶ್ವರ ಪೂಜಾರ ಸೇರಿದಂತೆ ಭಾರತದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿರುವ ಕೆಲವು ಆಟಗಾರರು ಉತ್ತಮ ಸ್ಪಿನ್ನರ್‌ಗಳ ವಿರುದ್ಧ ಆಡಲು ಕಷ್ಟಪಡುತ್ತಾರೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪೂಜಾರ ಇದುವರೆಗೂ ಆಸ್ಟ್ರೇಲಿಯಾ ಸ್ಪಿನ್ನರ್ ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಚಾಪೆಲ್ ಹೇಳಿದ್ದಾರೆ. ಅನೇಕರು ಶ್ರೇಯಸ್ ಅಯ್ಯರ್ ಅವರನ್ನು ಸ್ಪಿನ್ ವಿರುದ್ಧ ಉತ್ತಮ ಬ್ಯಾಟರ್ ಎಂದು ಹೇಳುತ್ತಾರೆ, ಆದರೆ ನನಗೆ ಹಾಗೆ ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಪಿನ್‌ಗೆ ಆಡಲು ಭಯಪಡುತ್ತಾರೆ!
"ಚೇತೇಶ್ವರ ಪೂಜಾರ ತುಂಬಾ ಶ್ರಮಪಡುತ್ತಿದ್ದಾರೆ. ಸರಣಿಯುದ್ದಕ್ಕೂ ಸ್ಪಿನ್ನರ್ ವಿರುದ್ಧ ಆಡಲು ಕಷ್ಟಪಡುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಶ್ರೇಯಸ್ ಅಯ್ಯರ್ ಸ್ಪಿನ್ ವಿರುದ್ಧ ಅತ್ಯುತ್ತಮ ಆಟಗಾರ ಎನ್ನುತ್ತಾರೆ, ಆದರೆ ನಾನೆಲ್ಲೂ ಅವರು ಸ್ಪಿನ್ ವಿರುದ್ಧ ಉತ್ತಮವಾಗಿ ಆಡಿರುವುದನ್ನು ನೋಡಿಲ್ಲ. ಅವರು ಸ್ಪಿನ್ ವಿರುದ್ಧ ಆಡಲು ಸ್ವಲ್ಪ ಭಯಪಡುತ್ತಾರೆ" ಎಂದು ಹೇಳಿದರು.
ಇಂದೋರ್ ಟೆಸ್ಟ್‌ನ ಮೊದಲನೇ ದಿನ ಭಾರತದ ಕಳಪೆ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಚಾಪೆಲ್, ಮೊದಲ ಸೆಷನ್‌ನಲ್ಲಿ ಪಿಚ್ ವರ್ತಿಸಿದ ರೀತಿಯನ್ನು ನೋಡಿ ಆತಿಥೇಯರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭಾರತ ತಂಡವನ್ನು 109 ರನ್‌ಗಳಿಗೆ ಆಲೌಟ್ ಮಾಡಲು ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿತು ಎಂದು ಹೇಳಿದರು.

ಕರಾರುವಕ್ಕಾಗಿ ಬೌಲಿಂಗ್ ಮಾಡಿದರು
"ಭಾರತ ತಂಡದ ಕೆಲವು ಬ್ಯಾಟರ್ ಗಳು ಸ್ಪಿನ್ ವಿರುದ್ಧ ಉತ್ತಮ ಆಟಗಾರರು ಎನಿಸುವುದಿಲ್ಲ. ಆಸ್ಟ್ರೇಲಿಯಾ ಸ್ಪಿನ್ನರ್ ಗಳು ಭಾರತದ ಬ್ಯಾಟರ್ ಗಳನ್ನು ಕಾಡಿದ್ದಾರೆ. ಅವರು ನಿಖರವಾಗಿ ಬೌಲಿಂಗ್ ಮಾಡಿದರು. ನಾವು ಇಂದು ಆಸ್ಟ್ರೇಲಿಯಾ ಮಾದರಿಯ ಭಾರತೀಯರ ಬ್ಯಾಟಿಂಗ್ ನೋಡಿದೆವು" ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮೂರು ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅವರು 16 ರನ್ ಗಳಿಸಿದ್ದಾರೆ. ಇಂದೋರ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್ ಆಗಿದ್ದರು.